CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತೀಯ ಟೇಬಲ್ ಟೆನ್ನಿಸ್ ತಂಡ
CWG 2022: ಕಾಮನ್‌ವೆಲ್ತ್ ಗೇಮ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತದ ಸತತ ಎರಡನೇ ಚಿನ್ನದ ಪದಕ ಮತ್ತು ಒಟ್ಟಾರೆ ಮೂರನೇ ಚಿನ್ನದ ಪದಕವಾಗಿದೆ.
ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ (CWG 2022) ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಆಗಸ್ಟ್ 2ರ ಮಂಗಳವಾರ ನಡೆದ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ 3-0 ಅಂತರದ ಜಯದೊಂದಿಗೆ ಸಿಂಗಾಪುರವನ್ನು 3-1 ಅಂತರದಿಂದ ಸೋಲಿಸಿ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಅಂದರೆ 2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದುಕೊಂಡಿತ್ತು. ಇದೀಗ ಈ ಬಾರಿ ಕೂಡ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷ ಎಂದರೆ 2018ರಂತೆಯೇ ಈ ಬಾರಿಯೂ ಭಾರತ ತಂಡದಲ್ಲಿ ಅಚಂತಾ ಶರತ್ ಕಮಲ್, ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಕಣಕ್ಕಿಳಿದಿದ್ದರು. ಅಂದರೆ ನಾಲ್ಕು ವರ್ಷಗಳ ಹಿಂದೆ ಆಡಿದ ಆಟಗಾರರೇ ಇದೀಗ ಮತ್ತೊಮ್ಮೆ ಭಾರತಕ್ಕೆ ಪದಕವನ್ನು ತಂದುಕೊಟ್ಟಿದ್ದಾರೆ.
ಕ್ರೀಡಾಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಫೈನಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಅಂತಿಮ ಪಂದ್ಯವು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಭಾರತದ ಪರ ಹರ್ಮೀತ್ ದೇಸಾಯಿ ಮತ್ತು ಜಿ ಸತ್ಯನ್ ಜೋಡಿಯು ತಮ್ಮ ಡಬಲ್ಸ್ ಪಂದ್ಯವನ್ನು 3-0 ಅಂತರದಿಂದ ಗೆದ್ದು ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದರ ನಂತರ, CWG ಇತಿಹಾಸದಲ್ಲಿ ಅದರ ಅತ್ಯಂತ ಅನುಭವಿ ಮತ್ತು ಅತ್ಯಂತ ಯಶಸ್ವಿ ಭಾರತೀಯ ಪ್ಯಾಡ್ಲರ್ ಅಚಂತಾ ಶರತ್ ಕಮಲ್ ಮೇಲೆ ಭಾರತದ ಭರವಸೆ ಇರಿಸಲಾಗಿತ್ತು. ಸಿಂಗಲ್ಸ್ ಪಂದ್ಯದಲ್ಲಿ ಕಠಿಣ ಹೋರಾಟದ ನಡುವೆಯೂ 4 ಗೇಮ್ ಗಳಲ್ಲಿ ನಡೆದ ಪಂದ್ಯದಲ್ಲಿ ಅಚಂತಾ 1-3 ಅಂತರದಿಂದ ಸೋತರು. ಇದರಿಂದ ಪಂದ್ಯವು 1-1 ರಲ್ಲಿ ಸಮಬಲಗೊಂಡಿತು.
ಇದರ ಹೊರತಾಗಿಯೂ, ಮುಂದಿನ ಮೂರು ಪಂದ್ಯಗಳಲ್ಲಿ ಬಲವಾಗಿ ಕಂಬ್ಯಾಕ್ ಮಾಡುವ ಮೂಲಕ ಪಂದ್ಯವನ್ನು 3-1 ರಲ್ಲಿ ಗೆದ್ದರು. ಸತ್ಯನ್ ಅವರ ವಿಜಯದ ನಂತರ ಇನ್ನೂ ಎರಡು ಪಂದ್ಯಗಳು ನಡೆದವು. ಅದರಲ್ಲಿ ಭಾರತವು ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕಾಗಿತ್ತು. ಮುಂದಿನ ಪಂದ್ಯದಲ್ಲೇ ಹರ್ಮೀತ್ ದೇಸಾಯಿ ಜಯಗಳಿಸುವುದರೊಂದಿಗೆ ಭಾರತ ತಂಡವು ಚಿನ್ನವನ್ನು ಖಚಿತಪಡಿಸಿಕೊಂಡಿತು.
ಮಿಶ್ರ ಸ್ಪರ್ಧೆಯಲ್ಲಿ 3ನೇ ಚಿನ್ನ: ಇದು ಕಾಮನ್‌ವೆಲ್ತ್ ಗೇಮ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತದ ಸತತ ಎರಡನೇ ಚಿನ್ನದ ಪದಕ ಮತ್ತು ಒಟ್ಟಾರೆ ಮೂರನೇ ಚಿನ್ನದ ಪದಕವಾಗಿದೆ. 2010ರ ಹೊಸದಿಲ್ಲಿ ಗೇಮ್ಸ್‌ನಲ್ಲಿ ಭಾರತ ತಂಡ ಮೊದಲ ಬಾರಿಗೆ ಸ್ವರ್ಣ ಗೆದ್ದಿತ್ತು. ಅಚಂತ ಶರತ್ ಕಮಲ್ ಕೂಡ ಆ ತಂಡದ ಭಾಗವಾಗಿದ್ದರು. ಅಲ್ಲದೆ 2018 ರಲ್ಲೂ ಸ್ವರ್ಣ ಪದಕ ಗೆದ್ದಿದ್ದರು. ಇದೀಗ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯ ಟೇಬಲ್ ಟೆನ್ನಿಸ್ ಪಟುಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.