CWG 2022: ಕಾಮನ್‌ವೆಲ್ತ್ ಗೇಮ್ಸ್ ಎಷ್ಟು ಗಂಟೆಗೆ ಶುರು? ಭಾರತದ ಧ್ವಜಧಾರಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
Commonwealth Games 2022 Opening Ceremony: ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆಯಾಗಿದ್ದು, ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್‌ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ.
ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ (Commonwealth Games 2022) ಕ್ರೀಡಾಕೂಟದ 22ನೇ ಆವೃತ್ತಿ ಗುರುವಾರದಿಂದ (ಜುಲೈ 28) ಶುರುವಾಗಲಿದೆ. ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 72 ಕಾಮನ್‌ವೆಲ್ತ್ ರಾಷ್ಟ್ರಗಳ 5000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ. ಇದರಲ್ಲಿ ಭಾರತದಿಂದ 214 ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದಾರೆ. ಇನ್ನು ಈ ಕ್ರೀಡಾಕೂಟಗಳಲ್ಲಿ 134 ಪುರುಷರ ಪದಕ ಸ್ಪರ್ಧೆಗಳು ಮತ್ತು 136 ಮಹಿಳೆಯರ ಪದಕ ಸ್ಪರ್ಧೆಗಳು ನಡೆಯಲಿರುವುದು ವಿಶೇಷ. ಅಂದರೆ ಪುರುಷರಿಗಿಂತ ಮಹಿಳಾ ಸ್ಪರ್ಧೆಗಳು ಹೆಚ್ಚಿವೆ ಎಂಬುದು ಇಲ್ಲಿ ಗಮನಾರ್ಹ.
ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ? ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಜುಲೈ 28 ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭ ಯಾವಾಗ ಶುರುವಾಗುತ್ತೆ? ಭಾರತೀಯ ಕಾಲಮಾನ ರಾತ್ರಿ 11:30 ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ.
ಉದ್ಘಾಟನಾ ಸಮಾರಂಭದ ಅತಿಥಿಗಳು: ಇಂಗ್ಲೆಂಡ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಅವರ ಉಪಸ್ಥಿತಿಯಲ್ಲಿ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಭಾರತ ತಂಡದ ಧ್ವಜಧಾರಿ ಯಾರು? ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡವನ್ನು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮತ್ತು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಧ್ವಜಧಾರಿಯಾಗಿ ಮುನ್ನಡೆಸಲಿದ್ದಾರೆ. ಈ ಹಿಂದೆ ನೀರಜ್ ಚೋಪ್ರಾ ಧ್ವಜಧಾರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಗಾಯದ ಕಾರಣ ಚೋಪ್ರಾ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಕಾರಣ ಪಿವಿ ಸಿಂಧು ಭಾರತ ತಂಡವನ್ನು ಮುನ್ನಡೆಸಯತ್ತಿದ್ದಾರೆ.
ಭಾರತದಿಂದ ಎಷ್ಟು ಸ್ಪರ್ಧಿಗಳು? ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 215 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಇದೀಗ ನೀರಜ್ ಚೋಪ್ರಾ ಹೊರಗುಳಿದಿರುವ ಕಾರಣ 214 ಸ್ಪರ್ಧಿಗಳು ಮಾತ್ರ ಸ್ಪರ್ಧಾ ಕಣದಲ್ಲಿ ಇರಲಿದ್ದಾರೆ.
ಯಾವ ಟಿವಿ ಚಾನೆಲ್‌ಗಳಲ್ಲಿ ಈ ಕ್ರೀಡಾಕೂಟವನ್ನು ವೀಕ್ಷಿಸಬಹುದು? ಈ ಸಮಾರಂಭದ ಹಾಗೂ ಕ್ರೀಡಾಕೂಟದ ನೇರ ಪ್ರಸಾರ Sony TEN 1, Sony TEN 2, Sony TEN 3, Sony SIX ಮತ್ತು Sony TEN 4 ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಡಿಡಿ ಸ್ಪೋರ್ಟ್ಸ್ನಲ್ಲಿ ಉದ್ಘಾಟನಾ ಸಮಾರಂಭವನ್ನು ಲೈವ್ ಸ್ಟ್ರೀಮ್ ಇರಲಿದೆ.
ಈ ಸಮಾರಂಭದ ಲೈವ್ ಸ್ಟ್ರೀಮ್ ಅನ್ನು ನಾನು ಎಲ್ಲಿ ವೀಕ್ಷಿಸಬಹುದು? ಈ ಸಮಾರಂಭದ ಲೈವ್ ಸ್ಟ್ರೀಮಿಂಗ್ ಸೋನಿ LIV ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತದೆ.
ಕಾಮನ್‌ವೆಲ್ತ್ ಕ್ರೀಡೆಗಳ ಸಂಪೂರ್ಣ ಪಟ್ಟಿ:
- ಈಜು – ಡೈವಿಂಗ್ಈ
- ಜು ಮತ್ತು ಪ್ಯಾರಾ ಈಜು
- ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್
- ಬ್ಯಾಡ್ಮಿಂಟನ್
- ಬಾಸ್ಕೆಟ್‌ಬಾಲ್
- ಬೀಚ್ ವಾಲಿಬಾಲ್
- ಬಾಕ್ಸಿಂಗ್
- ಟಿ20 ಕ್ರಿಕೆಟ್
- ಸೈಕ್ಲಿಂಗ್ – ಪರ್ವತ ಶ್ರೇಣಿ
- ಸೈಕ್ಲಿಂಗ್ – ರಸ್ತೆ
- ಸೈಕ್ಲಿಂಗ್ – ಟ್ರೈಯಲ್ ಟೈಮ್
- ಸೈಕ್ಲಿಂಗ್ – ಟ್ರ್ಯಾಕ್ ಮತ್ತು ಪ್ಯಾರಾ ಟ್ರ್ಯಾಕ್
- ಜಿಮ್ನಾಸ್ಟಿಕ್ಸ್ – ಕಲಾತ್ಮಕ
- ಜಿಮ್ನಾಸ್ಟಿಕ್ಸ್
- ಹಾಕಿ
- ಜೂಡೋ
- ಲಾನ್ ಬೌಲ್‌ಗಳು ಮತ್ತು ಪ್ಯಾರಾ ಲಾನ್ ಬೌಲ್‌ಗಳು
- ನೆಟ್‌ಬಾಲ್
- ಪ್ಯಾರಾ ಪವರ್ ಲಿಫ್ಟಿಂಗ್
- ರಗ್ಬಿ ಸೆವೆನ್ಸ್
- ಸ್ಕ್ವ್ಯಾಷ್
- ಟೇಬಲ್ ಟೆನ್ನಿಸ್ ಮತ್ತು ಪ್ಯಾರಾ ಟೇಬಲ್ ಟೆನ್ನಿಸ್
- ಟ್ರಯಥ್ಲಾನ್ ಮತ್ತು ಪ್ಯಾರಾ ಟ್ರಯಥ್ಲಾನ್
- ವೀಲ್ಚೇರ್ ಬ್ಯಾಸ್ಕೆಟ್‌ಬಾಲ್
- ವೈಟ್ ಲಿಫ್ಟಿಂಗ್
- ಕುಸ್ತಿ
ಕಾಮನ್‌ವೆಲ್ತ್ ಎಂದರೇನು?
ಕಾಮನ್‌ವೆಲ್ತ್ ಎಂಬುದು 1949 ರಲ್ಲಿ ಔಪಚಾರಿಕ ಸಂವಿಧಾನದ ಮೂಲಕ ಸ್ಥಾಪಿತವಾದ ರಾಷ್ಟ್ರಗಳ ಒಕ್ಕೂಟ. ಈ ಒಕ್ಕೂಟದಲ್ಲಿ ಪ್ರಸ್ತುತ 56 ಸದಸ್ಯ ರಾಷ್ಟ್ರಗಳಿವೆ. ವಿಶೇಷ ಎಂದರೆ ಈ ಹಿಂದೆ ಬ್ರಿಟಿಷರು ವಸಾಹತು ಹೊಂದಿದ್ದ ಬಹುಪಾಲು ರಾಷ್ಟ್ರಗಳು ಕಾಮನ್‌ವೆಲ್ತ್ ಒಕ್ಕೂಟದಲ್ಲಿದೆ. ರಾಜಕೀಯ, ಆರ್ಥಿಕ ಮತ್ತು ಮಾನವೀಯ ದೃಷ್ಟಿಕೋನದಲ್ಲಿ ಇಂತಹದೊಂದು ಒಕ್ಕೂಟವನ್ನು ರೂಪಿಸಲಾಗಿದೆ. ದೇಶಗಳ ಸಮೃದ್ಧಿ, ಪ್ರಜಾಪ್ರಭುತ್ವ ಮತ್ತು ಶಾಂತಿ ಈ ಒಕ್ಕೂಟದ ಮೂಲ ಧ್ಯೇಯವಾಗಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರವಾಗಿರುವ ಭಾರತಕ್ಕೆ ಯಾವುದಾದರೂ ಸಂದಿಗ್ಧ ಪರಿಸ್ಥಿತಿ ಎದುರಾದರೆ ಕಾಮನ್‌ವೆಲ್ತ್ ದೇಶಗಳಿಂದ ನೆರವು ಸಿಗಲಿದೆ. ಅಂದರೆ ಇಲ್ಲಿ ಎಲ್ಲಾ ರಾಷ್ಟ್ರಗಳು ಒಕ್ಕೂಟದೊಂದಿಗೆ ಒಗ್ಗಟ್ಟು ಪ್ರದರ್ಶಿಸಲಿದೆ.
ಏನಿದು ಕಾಮನ್‌ವೆಲ್ತ್ ಗೇಮ್ಸ್?
ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆಯಾಗಿದ್ದು, ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್‌ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಸದ್ಯ ಕಾಮನ್‌ವೆಲ್ತ್ ಒಕ್ಕೂಟದಲ್ಲಿ 56 ಸದಸ್ಯ ರಾಷ್ಟ್ರಗಳಿವೆ. ಇದಲ್ಲದೆ ಒಲಿಂಪಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸದ ಇತರ ಪ್ರಾಂತ್ಯಗಳಿಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿ 72 ಧ್ವಜಗಳ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.
ಜುಲೈ 28 ರಿಂದ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತವು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5 ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.