CWG 2022: ಭಾರತದ ಖಾತೆಯಲ್ಲಿ ಒಟ್ಟು 18 ಮೆಡಲ್: ಇಲ್ಲಿದೆ ಪದಕವೀರರ ಸಂಪೂರ್ಣ ವಿವರ

| Updated By: Vinay Bhat

Updated on: Aug 04, 2022 | 9:08 AM

Commonwealth Games 2022 Medal Tally: ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಈವರೆಗೆ ಒಟ್ಟು 18 ಪದಕಗಳನ್ನು ಬಾಜಿಕೊಂಡಿದೆ. ಇದರಲ್ಲಿ ಐದು ಚಿನ್ನ, ಆರು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಂಡಿದೆ.

CWG 2022: ಭಾರತದ ಖಾತೆಯಲ್ಲಿ ಒಟ್ಟು 18 ಮೆಡಲ್: ಇಲ್ಲಿದೆ ಪದಕವೀರರ ಸಂಪೂರ್ಣ ವಿವರ
CWG 2022
Follow us on

ಬರ್ಮಿಂಗ್ ​​ಹ್ಯಾಮ್​ ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಈವರೆಗೆ ಒಟ್ಟು 18 ಪದಕಗಳನ್ನು ಬಾಜಿಕೊಂಡಿದೆ. ಇದರಲ್ಲಿ ಐದು ಚಿನ್ನ, ಆರು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಂಡಿದೆ. ವಿಶೇಷ ಎಂದರೆ ಭಾರತಕ್ಕೆ ಇದುವರೆಗೆ ಬಂದಿರುವ 18 ಪದಕಗಳ ಪೈಕಿ 10 ಪದಕಗಳು ವೇಟ್​ ಲಿಫ್ಟಿಂಗ್ ​​ನಿಂದಲೇ ಆಗಿದೆ. ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ ​ ನಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಸ್ನ್ಯಾಚ್‌ ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಕೂಡ ಮಾಡಿದರು.

ವೇಟ್‌ ಲಿಫ್ಟರ್‌ ಹರ್ಜಿಂದರ್ ಕೌರ್ ಅವರು ಕಂಚಿನ ಪದಕ ಗೆದ್ದು ಬೀಗಿದರು. ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಕೌರ್ ಕಂಚಿಗೆ ಕೊರಳೊಡ್ಡಿದರು. ಅಂತೆಯೆ ಯುವ ವೇಟ್‌ ಲಿಫ್ಟರ್‌ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಬಾಜಿಕೊಂಡರು. ಪುರುಷರ 73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ 20 ವರ್ಷದ ವೇಟ್​​ ಲಿಫ್ಟರ್ ಬಂಗಾರಕ್ಕೆ ಕೊರಳೊಡ್ಡಿದರು.

ಜೆರೆಮಿ ಲಾಲ್ರಿನ್ನುಂಗಾ ಕಾಮನ್‌ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಸಂಕೇತ್ ಮಹಾದೇವ್ ಸಾಗರ್ ಕೂಡ ಪುರುಷರ ವೇಟ್‌ ಲಿಫ್ಟಿಂಗ್‌ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾದರು. ಕರ್ನಾಟಕದ ವೇಟ್‌ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ
CWG 2022: ರೇಣುಕಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಬಾರ್ಬಡೋಸ್: ಸೆಮಿಫೈನಲ್​ಗೆ ಭಾರತ ಲಗ್ಗೆ
CWG 2022: ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದ ಗುರ್​ದೀಪ್ ಸಿಂಗ್
CWG 2022: ಕಾಮನ್​ವೆಲ್ತ್ ಗೇಮ್ಸ್​​​​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್
CWG 2022: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತೆ ಗೊತ್ತಾ?

ಇನ್ನು ಪುರುಷರ 109 ಕೆಜಿ ತೂಕ ವಿಭಾಗದಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು. ಲವ್‌ಪ್ರೀತ್ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಕಂಚು ಗೆದ್ದರು. ವೇಟ್‌ಲಿಫ್ಟರ್‌ ಗುರ್​ದೀಪ್ ಸಿಂಗ್ ಅವರು ಕೂಡ ಬೆಳ್ಳಿ ಪದಕ ಗೆದ್ದು ಬೀಗಿದರು. ಇದರ ನಡುವೆ ಪುರುಷರ ಹೈ ಜಂಪ್​ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್​ವೆಲ್ತ್ ಗೇಮ್ಸ್​ ಇತಿಹಾಸದಲ್ಲಿ ಪುರುಷರ ಹೈ ಜಂಪ್​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ.

ಅತ್ತ ಸೌರವ್ ಘೋಷಾಲ್ ಅವರು ಸ್ಕ್ವಾಷ್‌ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ವಿಕಾಸ್ ಠಾಕೂರ್ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಪುರುಷರ 96 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಾಣಿಸಿಕೊಂಡ ವಿಕಾಸ್ ಠಾಕೂರ್ ಒಟ್ಟು 346 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು. ತೂಲಿಕಾ ಮಾನ್ ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.

Published On - 9:08 am, Thu, 4 August 22