CWG 2022: ರೇಣುಕಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಬಾರ್ಬಡೋಸ್: ಸೆಮಿಫೈನಲ್ಗೆ ಭಾರತ ಲಗ್ಗೆ
India Women vs Barbados Women: ಬರ್ಮಿಂಗ್ಹ್ಯಾಮ್ನ ಎಡ್ಗಬ್ಸ್ಟನ್ ಮೈದಾನದಲ್ಲಿ ನಡೆದ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಹರ್ಮನ್ಪ್ರೀತ್ ಪಡೆ ಬರೋಬ್ಬರಿ 100 ರನ್ಗಳ ಅಂತರದಿಂದ ಅಮೋಘ ಗೆಲುವು ಕಂಡಿತು. ಈ ಮೂಲಕ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ (CWG 2022) ನಡೆಯುತ್ತಿರುವ ಮಹಿಳಾ ಕ್ರಿಕೆಟ್ನಲ್ಲಿ ಭಾರತ ವನಿತೆಯರ ತಂಡ (India Women Cricket) ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ. ಬರ್ಮಿಂಗ್ಹ್ಯಾಮ್ನ ಎಡ್ಗಬ್ಸ್ಟನ್ ಮೈದಾನದಲ್ಲಿ ನಡೆದ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಹರ್ಮನ್ಪ್ರೀತ್ ಪಡೆ ಬರೋಬ್ಬರಿ 100 ರನ್ಗಳ ಅಂತರದಿಂದ ಅಮೋಘ ಗೆಲುವು ಕಂಡಿತು. ಮಾಡು ಒಲ್ಲವೇ ಮಡಿ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ಜೆಮಿಯ ರೋಡ್ರಿಗಸ್ (Jemimah Rodrigues) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ, ರೇಣುಕಾ ಸಿಂಗ್ ಬಾರ್ಬಡೋಸ್ ತಂಡಕ್ಕೆ ಅಕ್ಷರಶಃ ಮಾರಕವಾಗಿ ಪರಿಣಮಿಸಿದರು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಫಾರ್ಮ್ನಲ್ಲಿದ್ದ ಸ್ಮೃತಿ ಮಂದಾನ 5 ರನ್ಗೆ ಔಟಾದರು. ಆದರೆ, ಎರಡನೇ ವಿಕೆಟ್ಗೆ ಜೊತೆಯಾದ ಶಫಾಲಿ ವರ್ಮಾ ಹಾಗೂ ಜೆಮಿಯ ರೋಡ್ರಿಗಸ್ ಭರ್ಜರಿ ಆಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರುಮಾಡಿದ ಈ ಜೋಡಿ 71ರನ್ಗಳ ಕಾಣಿಕೆ ನೀಡಿತು. ಶಫಾಲಿ ಕೇವಲ 26 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ನೊಂದಿಗೆ 43 ರನ್ ಸಿಡಿಸಿ ಔಟಾದರು.
ಆದರೆ, ಶಫಾಲಿ ಔಟಾದ ಬೆನ್ನಲ್ಲೇ ನಾಯಕಿ ಹರ್ಮನ್ಪ್ಈತ್ ಕೌರ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹೊಡೆತ ಬಿದ್ದಿತು. ಜೊತೆಗೆ ತನಿಯ ಭಾಟಿಯ ಕೂಡ 6 ರನ್ಗೆ ಬ್ಯಾಟ್ ಕೆಳಗಿಟ್ಟರು. ದಿಢೀರ್ ಕುಸಿದ ತಂಡಕ್ಕೆ ಜೆಮಿಯ ಜೊತೆ ದೀಪ್ತಿ ಶರ್ಮಾ ಒಟ್ಟಾಗಿ ಆಸರೆಯಾದರು. ಈ ಜೋಡಿ 20 ಓವರ್ ವರೆಗೂ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು.
ರೋಡ್ರಿಗಸ್ 46 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 56 ರನ್ ಚಚ್ಚಿದರೆ, ದೀಪ್ತಿ 28 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 34 ರನ್ ಗಳಿಸಿದರು. ಭಾರತ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಬಾರ್ಬಡೋಸ್ ಮೊದಲ ಓವರ್ನಿಂದಲೇ ವಿಕೆಟ್ ಕಳೆದಕೊಂಡು ಸಾಗಿತು. ಜೊತೆಗೆ ನಿಧಾನ ಗತಿಯ ಬ್ಯಾಟಿಂಗ್ ನಡೆಸಿತು. ಹೀಗಾಗಿ ತಂಡದ ಮೊತ್ತ 50ರ ಗಡಿ ದಾಟಿದ್ದೇ ಹೆಚ್ಚು. ಕ್ಶೋಣ ನೈಟ್ 16 ಹಾಗೂ ಶಕೀರ ಸೆಲ್ಮನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ ಎರಡಂಕಿ ದಾಟಲಿಲ್ಲ. 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತಷ್ಟೆ. ಭಾರತ ಪರ ಬೆಂಕಿ ಬೌಲಿಂಗ್ ಪ್ರದರ್ಶಿಸಿದ ರೇಣುಕಾ 4 ಓವರ್ಗೆ ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತರು.