ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಮೊದಲ ಬಾರಿಗೆ ಆಡುತ್ತಿರುವ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡವು ಸತತವಾಗಿ ಪ್ರಬಲ ಪ್ರದರ್ಶನ ನೀಡುತ್ತಿದೆ. ತಂಡದ ಈ ಉತ್ತಮ ಪ್ರದರ್ಶನಕ್ಕೆ ಬಹುಪಾಲು ಪ್ರತಿ ಪಂದ್ಯದಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ದೊಡ್ಡ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರಿಂದ ಇಂತಹ ಪ್ರದರ್ಶನ ನಿರೀಕ್ಷಿಸಲಾಗಿದ್ದು, ಸ್ಮೃತಿ ನಿರಾಸೆ ಮೂಡಿಸಲಿಲ್ಲ. ಭಾರತದ ದಿಗ್ಗಜ ಬ್ಯಾಟರ್ ಬಿರುಸಿನ ಅರ್ಧಶತಕವನ್ನು ಗಳಿಸಿದ್ದಲ್ಲದೆ, ಬಲವಾದ ದಾಖಲೆಯನ್ನೂ ಮಾಡಿದರು.
ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದ 9ನೇ ದಿನವಾದ ಶನಿವಾರ ಆಗಸ್ಟ್ 6 ರಂದು ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ಭಾರತ ತಂಡವು ಮೊದಲು ಬ್ಯಾಟ್ ಮಾಡಿತು ಮತ್ತು ಪವರ್‌ಪ್ಲೇನಲ್ಲಿಯೇ, ಸ್ಮೃತಿ ಟೀಮ್ ಇಂಡಿಯಾಕ್ಕೆ ಅದ್ಭುತ ಆರಂಭವನ್ನು ನೀಡಿದರು. ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯಗಳಲ್ಲಿ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿ ಬೌಂಡರಿ ಗಳಿಸಿದ್ದ ಸ್ಮೃತಿ ಇಲ್ಲೂ ಅದೇ ಶೈಲಿಯನ್ನು ತೋರಿದ್ದು, ಫಲಿತಾಂಶ ಹಾಗೆಯೇ ಉಳಿದಿದೆ.
ಭಾರತಕ್ಕೆ ಅಬ್ಬರದ ಆರಂಭ
ಸ್ಮೃತಿ ಅವರ ಅಂತಹ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 7 ಓವರ್‌ಗಳಲ್ಲಿ 73 ರನ್ ಗಳಿಸಿತು. ಜೊತೆಗೆ ಈ ಎಡಗೈ ಬ್ಯಾಟರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಗದ ಅರ್ಧಶತಕ ಬಾರಿಸಿ ದಾಖಲೆಯನ್ನು ಸಹ ಮಾಡಿದರು. ಸ್ಮೃತಿ ಕೇವಲ 23 ಎಸೆತಗಳಲ್ಲಿ 50 ರನ್ ಗಳಿಸಿದರು. ಜೊತೆಗೆ ಈ ಪಂದ್ಯಾವಳಿಯಲ್ಲಿ ಸ್ಮೃತಿ ತಮ್ಮ ಎರಡನೇ ಅರ್ಧಶತಕವನ್ನು ಸಹ ಪೂರ್ಣಗೊಳಿಸಿದರು.
ಇದು ಸಿಡಬ್ಲ್ಯೂಜಿಗೆ ಮಾತ್ರವಲ್ಲದೆ ಮಹಿಳಾ ಟಿ20ಯಲ್ಲಿ ಭಾರತದ ಬ್ಯಾಟರ್ ಒಬ್ಬರ ವೇಗದ ಅರ್ಧಶತಕ ಎಂಬ ಹೊಸ ದಾಖಲೆಯೂ ಸೃಷ್ಟಿಯಾಯಿತು. ಸ್ಮೃತಿ ಈ ಹಿಂದೆ ನಿರ್ಮಿಸಿದ್ದ 24 ಎಸೆತಗಳ ಅರ್ಧಶತಕದ ದಾಖಲೆಯನ್ನು ಮುರಿದರು. ಅಷ್ಟೇ ಅಲ್ಲ, ಮಹಿಳಾ ಟೂರ್ನಿಯ ನಾಕೌಟ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ದಾಖಲೆಯೂ ಇದಾಗಿದೆ.
ಜೆಮಿಮಾ ನೆರವು
ಸ್ಮೃತಿ (61 ರನ್, 32 ಎಸೆತ, 8 ಬೌಂಡರಿ, 3 ಸಿಕ್ಸರ್) ಅವರ ಈ ಇನ್ನಿಂಗ್ಸ್‌ನ ನೆರವಿನಿಂದ ಭಾರತಕ್ಕೆ ತ್ವರಿತ ಆರಂಭ ಸಿಕ್ಕರೂ ಮಧ್ಯಮ ಓವರ್‌ಗಳಲ್ಲಿ ತಂಡದ ಇನಿಂಗ್ಸ್ ನಿಧಾನವಾಯಿತು. ಶೆಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ನಡುವಿನ ಬಲವಾದ ಜೊತೆಯಾಟವು ಕೊನೆಯ 20 ಓವರ್‌ಗಳಲ್ಲಿ ಭಾರತವನ್ನು 164 ರನ್‌ಗಳ ಉತ್ತಮ ಸ್ಕೋರ್‌ಗೆ ಕೊಂಡೊಯ್ದಿತು. ಜೆಮಿಮಾ 31 ಎಸೆತಗಳಲ್ಲಿ 44 ರನ್ ಗಳಿಸಿ ಅಜೇಯರಾಗಿ ಮರಳಿದರು.
Published On - 6:07 pm, Sat, 6 August 22