12 ಬೌಲರುಗಳು 653 ರನ್ ಸಿಡಿಸಿದರು: ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಅಬ್ಬರದಲ್ಲಿ ಗೆದ್ದವರ್ಯಾರು?
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲೀಸೆಸ್ಟರ್‌ಶೈರ್ ತಂಡದ ಪರಿಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕೈಕೊಟ್ಟರು.
ಯಾವುದೇ ಕ್ರಿಕೆಟ್ ತಂಡವಿರಲಿ, ಆ ತಂಡಗಳಿಗೆ ಅಗ್ರ ಬ್ಯಾಟ್ಸ್‌ಮನ್‌ಗಳೇ ದೊಡ್ಡ ಶಕ್ತಿ. ಹೀಗಾಗಿ ಪ್ರತಿ ತಂಡಗಳ ಬಲಿಷ್ಠತೆಯನ್ನು ನೋಡುವಾಗ ಅಗ್ರ ಕ್ರಮಾಂಕದಲ್ಲಿರುವ ಬ್ಯಾಟ್ಸ್ಮನ್ಗಳ ಪಟ್ಟಿಯತ್ತ ಗಮನಹರಿಸುತ್ತೇವೆ. ಆದರೆ ಇಲ್ಲೊಂದು ಪಂದ್ಯದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಎಂಬುದು ವಿಶೇಷ. ಅದು ಬೌಲರುಗಳು ಬ್ಯಾಟ್ಸ್ಮನ್ಗಳಾಗಿ ರನ್ ಮಳೆ ಹರಿಸಿರುವುದು ಮತ್ತೊಂದು ವಿಶೇಷ.
ಹೌದು, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಒನ್ ಡೇ ಕಪ್ ಟೂರ್ನಮೆಂಟ್‌ನಲ್ಲಿ ಲೀಸೆಸ್ಟರ್‌ಶೈರ್ ಮತ್ತು ಸೊಮರ್‌ಸೆಟ್ ನಡುವಣ ಪಂದ್ಯವು ರೋಚಕತೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳ ಒಟ್ಟು 12 ಬೌಲರ್‌ಗಳು ಕಲೆಹಾಕಿದ್ದು ಬರೋಬ್ಬರಿ 653 ರನ್ಗಳು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೊಮರ್‌ಸೆಟ್ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತು. ಈ ಬೃಹತ್ ಮೊತ್ತದಲ್ಲಿ ಕೊಡುಗೆ ನೀಡಿದ್ದು 6ನೇ ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬೌಲರುಗಳು ಎಂಬುದು ವಿಶೇಷ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾರ್ಜ್ ಬಾರ್ಟ್ಲೆಟ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು. 121 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಜಾರ್ಜ್ 89 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ 108 ರನ್ ಚಚ್ಚಿದ್ದರು. ಜಾರ್ಜ್ಗೆ ಸಾಥ್ ನೀಡಿದ 7 ನೇ ಕ್ರಮಾಂಕದ ಬ್ಯಾಟ್ಸ್ಮನ್ ಜಾರ್ಜ್ ಥಾಮಸ್ 77 ಎಸೆತಗಳಲ್ಲಿ 75 ರನ್ ಬಾರಿಸಿದರು. ಇವರ ಈ ಅಮೋಘ ಆಟದ ಫಲವಾಗಿ ಸೊಮರ್‌ಸೆಟ್ ತಂಡವು 326 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲೀಸೆಸ್ಟರ್‌ಶೈರ್ ತಂಡದ ಪರಿಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಲೆವಿಸ್ ಹಿಲ್ಸ್ ಅದ್ಭುತ ಶತಕ ಬಾರಿಸಿದರು. 106 ಎಸೆತಗಳಲ್ಲಿ 107 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾಗ್ಯೂ ಮತ್ತೆ ತಂಡ ಕುಸಿತಕ್ಕೊಳಗಾಯಿತು. ಈ ಹಂತದಲ್ಲಿ 7ನೇ ಕ್ರಮಾಂಕದ ಬ್ಯಾಟ್ ಬೀಸಿದ ಲೂಯಿಸ್ ಕಿಂಬರ್ 57 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 85 ರನ್ ಸಿಡಿಸಿದರು. ಪರಿಣಾಮ 5 ಓವರ್ಗಳು ಬಾಕಿ ಇರುವಂತೆ ಲೀಸೆಸ್ಟರ್‌ಶೈರ್ ತಂಡವು 327 ರನ್ಗಳ ಗುರಿ ಮುಟ್ಟಿತು. ಉಭಯ ತಂಡಗಳ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಭರ್ಜರಿ ಪ್ರದರ್ಶನದೊಂದಿಗೆ ರಾಯಲ್ ಲಂಡನ್ ಒನ್ ಡೇ ಕಪ್ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಲಂಡನ್ ಕೌಂಟಿ ಇತಿಹಾಸ ಅಪರೂಪದ ಪಂದ್ಯ ಎಂಬ ಹೆಗ್ಗಳಿಕೆಗೂ ಈ ಪಂದ್ಯ ಸಾಕ್ಷಿಯಾಯಿತು.
ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ
ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ
(cricket, cricket news, england cricket, Royal London One Day Cup)