
2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ದಕ್ಷಿಣ ಆಫ್ರಿಕಾದ ಗೆಲುವಿನ ಓಟ ಸೂಪರ್ 8 ಸುತ್ತಿನಲ್ಲೂ ಮುಂದುವರೆದಿದೆ. ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿದ್ದ ಐಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಸೂಪರ್ 8 ಸುತ್ತಿನಲ್ಲೂ ಆಡಿದ ಮೂರು ಪಂದ್ಯಗಳನ್ನು ಗೆದ್ದಿದೆ. ಈಗಾಗಲೇ ಟೂರ್ನಿಯ ಸೆಮಿಫೈನಲ್ ತಲುಪಿರುವ ಆಫ್ರಿಕನ್ ತಂಡವು ಅಂತಿಮ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆಯನ್ನು 5 ವಿಕೆಟ್‌ಗಳಿಂದ ಸೋಲಿಸಿ, ಈ ವಿಶ್ವಕಪ್‌ನಲ್ಲಿ ತನ್ನ 100% ಗೆಲುವಿನ ದಾಖಲೆಯನ್ನು ಉಳಿಸಿಕೊಂಡಿದೆ. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಸೋಲಿಸಿದ ಜಿಂಬಾಬ್ವೆ, ಸೂಪರ್ 8 ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾಗಿದೆ.
ಮಾರ್ಚ್ 1 ರಂದು ಭಾನುವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ 154 ರನ್ ಕಲೆಹಾಕಿತು. ದಕ್ಷಿಣ ಆಫ್ರಿಕಾದ ಬೌಲಿಂಗ್ ವಿರುದ್ಧ ಜಿಂಬಾಬ್ವೆಯ ಬ್ಯಾಟಿಂಗ್ ಆರಂಭದಿಂದಲೂ ಸಂಕಷ್ಟದಲ್ಲಿತ್ತು. ನಾಯಕ ಸಿಕಂದರ್ ರಜಾ ಮಾತ್ರ ತಂಡದ ಪರ ಏಕಾಂಗಿ ಹೋರಾಟ ನಡೆಸಿ 43 ಎಸೆತಗಳಲ್ಲಿ 73 ರನ್‌ಗಳ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ಪರ, ಯುವ ವೇಗಿ ಕ್ವೆನಾ ಎಂಫಕಾ 4 ಓವರ್‌ಗಳಲ್ಲಿ ಕೇವಲ 21 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭವೂ ಕೆಟ್ಟದಾಗಿತ್ತು. ಸಿಕಂದರ್ ರಜಾ ಇನ್ನಿಂಗ್ಸ್‌ನ ಮೊದಲ ಮತ್ತು ಮೂರನೇ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕರಿಬ್ಬರನ್ನು ಔಟ್ ಮಾಡಿದರು. ಆದಾಗ್ಯೂ, ರಯಾನ್ ರಿಕಲ್ಟನ್, ಡೆವಾಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ ತ್ವರಿತವಾಗಿ ರನ್ ಗಳಿಸುವ ಮೂಲಕ ಜಿಂಬಾಬ್ವೆಯ ಮೇಲೆ ಒತ್ತಡ ಹೇರಿದರು. ಆಫ್ರಿಕನ್ ತಂಡವು ಕೇವಲ 101 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡರೂ, ಗುರಿ ತುಂಬಾ ಹೆಚ್ಚಿರಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ ಮತ್ತು ಜಾರ್ಜ್ ಲಿಂಡೆ ಒಟ್ಟಾಗಿ ತಂಡವನ್ನು ಕೇವಲ 17.5 ಓವರ್‌ಗಳಲ್ಲಿ ಸುಲಭವಾಗಿ ಗುರಿಯತ್ತ ಕೊಂಡೊಯ್ದರು. ಇದು ಈ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾದ ಸತತ ಏಳನೇ ಗೆಲುವು.
ಈ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಗುಂಪು 1 ರಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ನಲ್ಲಿ ಆಫ್ರಿಕಾ ತಂಡವು ಗುಂಪು 2 ರಲ್ಲಿ ಎರಡನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 4 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Sun, 1 March 26