
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್ (2026 Women’s T20 World Cup) ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ (India vs Pakistan) ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಪಾಕಿಸ್ತಾನವನ್ನು ಸೋಲಿಸಿದ ಭಾರತ ವನಿತಾ ಪಡೆ, ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನದ ವಿರುದ್ಧ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ಮುಂದೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 106 ರನ್ಗಳಿಗೆ ಆಲೌಟ್ ಆಗುವ ಮೂಲಕ 64 ರನ್‌ಗಳ ಹೀನಾಯ ಸೋಲು ಕಂಡಿತು.
ನಾಲ್ಕು ವರ್ಷಗಳ ಹಿಂದೆ ಅಂದರೆ, 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎಡ್ಜ್‌ಬಾಸ್ಟನ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಇದೇ ರೀತಿ ಏಕಪಕ್ಷೀಯವಾಗಿ ಸೋಲಿಸಿತ್ತು. ಆ ಪಂದ್ಯದಲ್ಲೂ ಸ್ಟಾರ್ ಓಪನರ್ ಸ್ಮೃತಿ ಮಂಧಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿಯೂ ಕಥೆ ಭಿನ್ನವಾಗಿರಲಿಲ್ಲ. ಈ ಟಿ20 ವಿಶ್ವಕಪ್ ಪಂದ್ಯದಲ್ಲಿ, ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 170 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ತಂಡದ ಪರ ಮಂಧಾನ 68 ರನ್ ಗಳಿಸಿದರು, ಇದು ಪಾಕಿಸ್ತಾನ ವಿರುದ್ಧ ಅವರ ಅತ್ಯಧಿಕ ಸ್ಕೋರ್. ರಿಚಾ ಘೋಷ್ ಕೂಡ ಸ್ಫೋಟಕ 34 ರನ್‌ಗಳ ಇನ್ನಿಂಗ್ಸ್ ಆಡಿದರು.
IND vs PAK: ಪಾಕಿಸ್ತಾನ್ ವಿರುದ್ಧ ನಿರ್ಣಾಯಕ ಅರ್ಧಶತಕ ಚಚ್ಚಿದ ಸ್ಮೃತಿ ಮಂಧಾನ
ಇದಕ್ಕೆ ಪ್ರತಿಕ್ರಿಯೆಯಾಗಿ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರ್ತಿಯರು ಉತ್ತಮ ಆರಂಭವನ್ನು ನೀಡಿದರು. ಪವರ್‌ಪ್ಲೇನಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 50 ರನ್ ಕಲೆಹಾಕಿದರು. ಆದಾಗ್ಯೂ, ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ದಾಳಿಗಿಳಿದ ಕೂಡಲೇ ಪಾಕಿಸ್ತಾನದ ಪೆವಿಲಿಯನ್ ಪರೇಡ್ ಶುರುವಾಯಿತು. ಇತ್ತ ಶ್ರೀ ಚರಣಿ ಮತ್ತು ಶಫಾಲಿ ವರ್ಮಾ ಕೂಡ ಪಾಕಿಸ್ತಾನಕ್ಕೆ ಹೊಡೆತ ನೀಡಿದರು, ಶಫಾಲಿ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಅತಿದೊಡ್ಡ ವಿಕೆಟ್ ಪಡೆದರು. ನಂತರ, 17 ನೇ ಓವರ್‌ನಲ್ಲಿ, ದೀಪ್ತಿ ಮೂರು ವಿಕೆಟ್‌ಗಳನ್ನು ಕಬಳಿಸಿ ಪಾಕಿಸ್ತಾನವನ್ನು 106 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
Published On - 10:33 pm, Sun, 14 June 26