AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ವಿಕೆಟ್ ಪಡೆದಿದ್ದಾರೆ, ಕನಿಷ್ಠ ಪಕ್ಷ ಯಾಕೆ ಆಯ್ಕೆ ಮಾಡಿಲ್ಲ ಅಂತಾದ್ರು ಹೇಳಿ!

ರಣಜಿ ಟ್ರೋಫಿಯಲ್ಲಿ ಬರೋಬ್ಬರಿ 60 ವಿಕೆಟ್ ಉರುಳಿಸಿ, ಇತಿಹಾಸ ನಿರ್ಮಿಸಿದ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವೇಗಿ ಆಖಿಬ್ ನಬಿಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಸಿಗದಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬಿಸಿಸಿಐ ಆಯ್ಕೆ ಸಮಿತಿಯ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

60 ವಿಕೆಟ್ ಪಡೆದಿದ್ದಾರೆ, ಕನಿಷ್ಠ ಪಕ್ಷ ಯಾಕೆ ಆಯ್ಕೆ ಮಾಡಿಲ್ಲ ಅಂತಾದ್ರು ಹೇಳಿ!
Irfan Pathan - Auqib NabiImage Credit source: x.com
ಝಾಹಿರ್ ಯೂಸುಫ್
|

Updated on: Jul 30, 2026 | 2:18 PM

Share

ಭಾರತ ಮತ್ತು ಶ್ರೀಲಂಕಾ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ, ಈ ತಂಡದಲ್ಲಿ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿಗೆ ಸ್ಥಾನ ನೀಡಲಾಗಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ನಬಿ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಶ್ನೆಗಳೆನ್ನೆತ್ತಿದ್ದಾರೆ.

ಇರ್ಫಾನ್ ಪಠಾಣ್ ಅಸಮಾಧಾನ:

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ನಿರ್ಧಾರದ ವಿರುದ್ಧ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್‌ಸ್ಟಾರ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶಿ ಕ್ರಿಕೆಟ್‌ನ ಪ್ರತಿಭೆಗಳನ್ನು ನಡೆಸಿಕೊಳ್ಳುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಖಿಬ್ ನಬಿ ಅವರನ್ನು ಆಯ್ಕೆ ಮಾಡದಿರುವುದಕ್ಕೆ ನನ್ನ ಬಳಿ ಯಾವುದೇ ತಾರ್ಕಿಕ ಉತ್ತರವಿಲ್ಲ. ಜನರು ಕೇವಲ ವೇಗದ ಬಗ್ಗೆ ಮಾತನಾಡುತ್ತಾರೆ, ಆದರೆ ಬೌಲರ್ ಹೇಗೆ ಬ್ಯಾಟರ್‌ಗಳನ್ನು ಕಂಗಾಲು ಮಾಡುತ್ತಿದ್ದಾನೆ ಎಂಬುದನ್ನು ನೋಡಬೇಕು. ದೇಶಿ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಿಗೆ ಅವರು ಸತತವಾಗಿ ಕಾಟ ನೀಡಿದ್ದಾರೆ.

ಅದರಲ್ಲೂ ಕಳೆದ ರಣಜಿ ಸೀಸನ್​ನಲ್ಲಿ ಬರೋಬ್ಬರಿ 60 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಆಖಿಬ್ ನಬಿ ಅವರನ್ನು ಆಯ್ಕೆ ಮಾಡಿಲ್ಲ. ಕನಿಷ್ಠ ಪಕ್ಷ ಯಾಕೆ ಆಯ್ಕೆ ಮಾಡಿಲ್ಲ ಅಂತಾದ್ರು ಹೇಳಿ ಎಂದು ಆಯ್ಕೆ ಸಮಿತಿ ವಿರುದ್ಧ ಇರ್ಫಾನ್ ಪಠಾಣ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಆಖಿಬ್ ನಬಿ ಯಾಕೆ ಆಯ್ಕೆಯಾಗಬೇಕಿತ್ತು?

  • ರಣಜಿ ಟೂರ್ನಿಯಲ್ಲಿ ಮಿಂಚಿಂಗ್: ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆಡುತ್ತಿರುವ ನಬಿ, ಕೇವಲ 10 ಪಂದ್ಯಗಳಲ್ಲಿ ಬರೋಬ್ಬರಿ 60 ವಿಕೆಟ್ ಪಡೆಯುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
  • 104 ವಿಕೆಟ್​ಗಳು: ಆಖಿಬ್ ನಬಿ ಕಳೆದ ಎರಡು ರಣಜಿ ಸೀಸನ್​ಗಳಲ್ಲಿ 18 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಪಡೆದಿರುವುದು ಬರೋಬ್ಬರಿ 104 ವಿಕೆಟ್​ಗಳು ಎಂದರೆ ನಂಬಲೇಬೇಕು.
  • ಫೈನಲ್ ಗೆಲುವಿನ ರೂವಾರಿ: ಜಮ್ಮು ಮತ್ತು ಕಾಶ್ಮೀರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಮುಕುಟ ಮುಡಿಗೇರಿಸಿಕೊಳ್ಳುವಲ್ಲಿ ನಬಿ ಮಹತ್ತರ ಪಾತ್ರ ವಹಿಸಿದ್ದರು. ಅದರಲ್ಲೂ ಕರ್ನಾಟಕ ವಿರುದ್ಧ ಫೈನಲ್​ನಲ್ಲಿ 6 ವಿಕೆಟ್ ಉರುಳಿಸಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಆಖಿಬ್ ನಬಿ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬೇಕೆಂದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ದಿಲೀಪ್ ವೆಂಗ್​ಸರ್ಕಾರ್, ಸಂಜಯ್ ಮಂಜ್ರೇಕರ್ ಸೇರಿದಂತೆ ಹಲವು ಮಾಜಿ ಆಟಗಾರರು ಆಗ್ರಹಿಸಿದ್ದರು. ಇದಾಗ್ಯೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ನಬಿಗೆ ಸ್ಥಾನ ನೀಡಲಾಗಿಲ್ಲ.

ಆಯ್ಕೆ ಸಮಿತಿಯ ದ್ವಂದ್ವ ನೀತಿ!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಬ್ರಾರ್ ಆಯ್ಕೆಗೆ ಮಾನದಂಡವೇನು ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ. ಏಕೆಂದರೆ ಕಳೆದ ರಣಜಿ ಸೀಸನ್​ನಲ್ಲಿ ಗುರ್ನೂರ್ ಬ್ರಾರ್ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಕೇವಲ 26 ಮಾತ್ರ.

ಅಂದರೆ ಇಲ್ಲಿ 60 ವಿಕೆಟ್ ಕಬಳಿಸಿದ ಆಖಿಬ್ ನಬಿ ಅವರನ್ನು ಕೈ ಬಿಟ್ಟು 26 ವಿಕೆಟ್ ಪಡೆದಿರುವ ಗುರ್ನೂರ್ ಬ್ರಾರ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಇದನ್ನೇ ಈಗ ಇರ್ಫಾನ್ ಪಠಾಣ್ ಸೇರಿದಂತೆ ಹಲವು ಕ್ರಿಕೆಟ್ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: 40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

Follow Us