2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ

2027 ODI World Cup Format Revealed: 2027 ರ ಏಕದಿನ ವಿಶ್ವಕಪ್ ಸ್ವರೂಪ ಅನಾವರಣಗೊಂಡಿದ್ದು, ಟೀಂ ಇಂಡಿಯಾಕ್ಕೆ 2003 ರ ಮಾದರಿಯಲ್ಲಿ ಮತ್ತೆ ಟ್ರೋಫಿ ಗೆಲ್ಲುವ ಅವಕಾಶವಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾದಲ್ಲಿ 14 ತಂಡಗಳು ಸೂಪರ್ ಸಿಕ್ಸ್ ಹಂತದೊಂದಿಗೆ ಸ್ಪರ್ಧಿಸಲಿವೆ. 2023 ರ ವಿಶ್ವಕಪ್ ವೈಫಲ್ಯದ ನಂತರ ಟೀಂ ಇಂಡಿಯಾ ಈ ಬಾರಿ ಗೆಲುವಿನ ಗುರಿ ಹೊಂದಿದೆ. ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ
Odi World Cup 2027

Updated on: Mar 23, 2026 | 8:37 PM

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾದ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್ (2027 ODI World Cup). 2023 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಮುಗ್ಗರಿಸಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದ್ದ ಟೀಂ ಇಂಡಿಯಾ (Team India) ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದೆಲ್ಲದರ ನಡುವೆ 2027 ರ ಏಕದಿನ ವಿಶ್ವಕಪ್ ಯಾವ ಸ್ವರೂಪದಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸ್ವರೂಪವನ್ನು ನೋಡಿದ ಟೀಂ ಇಂಡಿಯಾ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ.

2027 ರ ಏಕದಿನ ವಿಶ್ವಕಪ್‌ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ಹಿಂದೆ 2003 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಆಗ ಕೀನ್ಯಾ ಮೂರನೇ ಆತಿಥೇಯ ರಾಷ್ಟ್ರವಾಗಿತ್ತು, ಆದರೆ ಈ ಬಾರಿ ನಮೀಬಿಯಾ ಮೂರನೇ ಆತಿಥೇಯ ರಾಷ್ಟ್ರವಾಗಲಿದೆ. ಆದರೆ ಹೋಲಿಕೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ತಂಡಗಳ ಸಂಖ್ಯೆ ಮತ್ತು ಸ್ವರೂಪವು 2003 ರ ವಿಶ್ವಕಪ್‌ಗೆ ಹೋಲುತ್ತದೆ.

2003 ರಲ್ಲಿ ನಡೆದಂತೆ ನಡೆಯಲಿದೆ ಈ ವಿಶ್ವಕಪ್

ಈ ಬಾರಿ, 2003 ರ ವಿಶ್ವಕಪ್‌ನಂತೆಯೇ 14 ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. ಆದರೆ ತಂಡಗಳ ಸಂಖ್ಯೆಗಿಂತ ವಿಶ್ವಕಪ್‌ನ ಸ್ವರೂಪ ಮುಖ್ಯವಾಗಿದೆ. ಈ 14 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ 2 ಗುಂಪುಗಳಲ್ಲಿ ತಲಾ ಏಳು ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ 6 ಸುತ್ತಿಗೆ ಮುನ್ನಡೆಯುತ್ತವೆ, ಅಲ್ಲಿ ಪ್ರತಿ ತಂಡವು ಇನ್ನೊಂದು ಗುಂಪಿನ ಮೂರು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಗುಂಪು ಹಂತದಲ್ಲಿ ತಂಡವೊಂದು ಗಳಿಸಿದ ಅಂಕಗಳು, ಸೂಪರ್ ಸಿಕ್ಸ್ ಹಂತದಲ್ಲೂ ಪರಿಗಣನೆಗೆ ಬರುತ್ತವೆ. ಇದು ಪ್ರತಿ ಪಂದ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಅಂತಿಮವಾಗಿ, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತವೆ.

2027 ರ ಏಕದಿನ ವಿಶ್ವಕಪ್​ಗೆ ಈಗಲೇ 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ

2003 ರ ವಿಶ್ವಕಪ್ ಕೂಡ ಇದೇ ಮಾದರಿಯಲ್ಲಿ ನಡೆದಿತ್ತು. ಆ ಟೂರ್ನಿಯಲ್ಲಿಯೂ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಆದರೆ, ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈ ಬಾರಿಯ ವಿಶ್ವಕಪ್ ಕೂಡ ಅದೇ ಮಾದರಿ ಮತ್ತು ಅದೇ ದೇಶಗಳಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾ ಫೈನಲ್ ತಲುಪಿ ಟ್ರೋಫಿ ಎತ್ತಿಹಿಡಿಯಲಿ ಎಂಬುದನ್ನು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us