Suresh Raina: ಸುರೇಶ್ ರೈನಾ ಖರೀದಿಗೆ 3 ತಂಡಗಳ ಆಸಕ್ತಿ..!
Suresh Raina SA20 League: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ಸುರೇಶ್ ರೈನಾ (Suresh Raina) ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಐಪಿಎಲ್ನಲ್ಲಿ ಎಡಗೈ ದಾಂಡಿಗನ ಯುಗಾಂತ್ಯವಾಗಿದೆ. ವಿಶೇಷ ಎಂದರೆ ರೈನಾ ಬಿಸಿಸಿಐನಿಂದ ಎನ್ಒಸಿ ಪಡೆಯುವುದಾಗಿ ತಿಳಿಸಿದ್ದಾರೆ. ಅಂದರೆ ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿ ವಿದೇಶಿ ಲೀಗ್ನತ್ತ ಮುಖಮಾಡಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ಮುಂಬರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ಗಾಗಿ ಅವರು ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರ ಬೆನ್ನಲ್ಲೇ ಸುರೇಶ್ ರೈನಾಗೆ ಎರಡು ಹೊಸ ಟಿ20 ಲೀಗ್ಗಳಿಂದ ಭರ್ಜರಿ ಆಫರ್ಗಳು ಕೂಡ ಬಂದಿವೆಯಂತೆ.
ಅಂದರೆ ಐಪಿಎಲ್ ಫ್ರಾಂಚೈಸಿಗಳನ್ನು ಒಳಗೊಂಡಿರುವ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ಗಳ ತಂಡದಲ್ಲಿ ಕಾಣಿಸಿಕೊಳ್ಳುವಂತೆ ಸುರೇಶ್ ರೈನಾಗೆ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ. ಸೌತ್ ಆಫ್ರಿಕಾ ಟಿ20 ಲೀಗ್ ಹರಾಜಿಗಾಗಿ ಸೆಪ್ಟೆಂಬರ್ 19 ರಂದು ನೋಂದಣಿ ಪ್ರಕ್ರಿಯೆಗಳು ನಡೆಯಲಿದೆ. ಇದಕ್ಕೂ ಮುನ್ನವೇ ರೈನಾ ಹೆಸರು ಮೂರು ತಂಡಗಳೊಂದಿಗೆ ತಳುಕು ಹಾಕಿಕೊಂಡಿರುವುದು ವಿಶೇಷ. ಅಂದರೆ ರೈನಾ ಎಸ್ಎ ಟಿ20 ಲೀಗ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡರೆ 3 ತಂಡಗಳು ಖರೀದಿಗಾಗಿ ಪೈಪೋಟಿ ನಡೆಸುವುದು ಖಚಿತ. ಆ ತಂಡಗಳು ಯಾವುದೆಂದರೆ…
- ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಏಕೆಂದರೆ ತಂಡದಲ್ಲಿ ಭಾರತೀಯ ಆಟಗಾರನೊಬ್ಬ ಕಾಣಿಸಿಕೊಂಡರೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗುತ್ತದೆ. ಅದರಲ್ಲೂ ಸಿಎಸ್ಕೆ ಪರ ಆಡಿದ್ದ ಫಾಫ್ ಡುಪ್ಲೆಸಿಸ್, ಮೊಯೀನ್ ಅಲಿ ಜೊತೆ ರೈನಾ ಕೈ ಜೋಡಿಸಿದರೆ ತಂಡಕ್ಕೆ ಆನೆಬಲ ಬಂದತಾಗಲಿದೆ.
- MI ಕೇಪ್ ಟೌನ್: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ MI ಕೇಪ್ ಟೌನ್ ತಂಡ ಕೂಡ ಸುರೇಶ್ ರೈನಾ ಅವರ ಖರೀದಿಗೆ ಆಸಕ್ತಿ ಹೊಂದಿದೆ. ಇಲ್ಲಿ ಮುಖ್ಯವಾಗಿ ಭಾರತೀಯ ಆಟಗಾರರು ತಂಡದಲ್ಲಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಆ ತಂಡಕ್ಕೆ ಬೆಂಬಲ ವ್ಯಕ್ತವಾಗುತ್ತದೆ. ಹೀಗಾಗಿ MI ಕೇಪ್ ಟೌನ್ ಕೂಡ ಅನುಭವಿ ಆಟಗಾರ ಸುರೇಶ್ ರೈನಾ ಅವರ ಖರೀದಿಗೆ ಪೈಪೋಟಿ ನಡೆಸಿದರೂ ಅಚ್ಚರಿಪಡಬೇಕಿಲ್ಲ.
- ಪ್ರಿಟೋರಿಯಾ ಕ್ಯಾಪಿಟಲ್ಸ್: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ ಕೂಡ ಸುರೇಶ್ ರೈನಾ ಅವರ ಖರೀದಿಗೆ ಆಸಕ್ತಿ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಡೆಲ್ಲಿ ಮಾಲೀಕರ ತಂಡದಲ್ಲಿ ಸುರೇಶ್ ರೈನಾ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.
ಒಟ್ಟಿನಲ್ಲಿ ಐಪಿಎಲ್ನಿಂದ ನಿವೃತ್ತಿಯಾಗುತ್ತಿದ್ದಂತೆ ಸುರೇಶ್ ರೈನಾ ವಿದೇಶಿ ಲೀಗ್ಗಳತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿಗಳು ಮಹತ್ವ ಪಡೆದುಕೊಂಡಿದ್ದು, ಅದರಂತೆ ಮುಂಬರುವ ದಿನಗಳಲ್ಲಿ ಎಡಗೈ ದಾಂಡಿಗ ಯಾವ ಲೀಗ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.