Team India
ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಟಿ20 ಕ್ರಿಕೆಟ್ನಲ್ಲಿ ಸಿಕ್ಸ್-ಫೋರ್ಗಳ ಅಬ್ಬರ ಜೋರಾಗಿಯೇ ಇರುತ್ತದೆ. ಅದರಲ್ಲೂ ಟೀಮ್ ಇಂಡಿಯಾ ಆಟಗಾರರು ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಹೀಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (165 ಸಿಕ್ಸ್) ಹೆಸರಿನಲ್ಲಿದೆ. ಕಿವೀಸ್ ಆಟಗಾರನ ಹೊರತುಪಡಿಸಿ, ನ್ಯೂಜಿಲೆಂಡ್‌ನ ಕಾಲಿನ್ ಮನ್ರೊ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್, ಆಸ್ಟ್ರೇಲಿಯಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್‌ನ ಇಯಾನ್ ಮೊರ್ಗನ್ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಇದ್ದಾರೆ. ಆಗಿದ್ರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆಟಗಾರರು ಯಾರು ಎಂದು ನೋಡೋಣ…
- 5 – ಸುರೇಶ್ ರೈನಾ (58 ಸಿಕ್ಸ್): ಸುರೇಶ್ ರೈನಾ ಅವರು ಭಾರತ ಪರ 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 58 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೈನಾ ತಮ್ಮ ವೃತ್ತಿ ಜೀವನದಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳ ನೆರವಿನಿಂದ ಒಟ್ಟು 1605 ರನ್ ಗಳಿಸಿದ್ದಾರೆ. ಸುರೇಶ್ ರೈನಾ 2010ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಶತಕವನ್ನೂ ಕೂಡ ಬಾರಿಸಿದ್ದರು.
- 4 – ಕೆಎಲ್ ರಾಹುಲ್ (73 ಸಿಕ್ಸ್): ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಇದುವರೆಗೆ 56 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಈ ವೇಳೆ ಒಟ್ಟು 73 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನದಲ್ಲಿ 2 ಶತಕ ಮತ್ತು 16 ಅರ್ಧ ಶತಕಗಳ ನೆರವನಿಂದ ಟಿ20 ಕ್ರಿಕೆಟ್ನಲ್ಲಿ ಒಟ್ಟು 1831 ರನ್ ಗಳಿಸಿದ್ದಾರೆ.
- 3 – ಯುವರಾಜ್ ಸಿಂಗ್ (74 ಸಿಕ್ಸ್): ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 74 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಯುವರಾಜ್ ತಮ್ಮ ವೃತ್ತಿಜೀವನದಲ್ಲಿ 58 ಟಿ20 ಪಂದ್ಯಗಳನ್ನು ಆಡಿದ್ದು, ಈ ವೇಳೆ 8 ಅರ್ಧ ಶತಕಗಳ ನೆರವಿನಿಂದ 1177 ರನ್ ಕಲೆಹಾಕಿದ್ದರು.
- 2 – ವಿರಾಟ್ ಕೊಹ್ಲಿ (92 ಸಿಕ್ಸ್): ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 97 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 92 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 30 ಅರ್ಧಶತಕಗಳ ನೆರವಿನಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 3296 ರನ್ ಗಳಿಸಿದ್ದಾರೆ.
- 1 – ರೋಹಿತ್ ಶರ್ಮಾ (155 ಸಿಕ್ಸ್): ರೋಹಿತ್ ಶರ್ಮಾ ಅವರನ್ನು ಪ್ರಸ್ತುತ ಟಿ20 ಕ್ರಿಕೆಟ್ನ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಹಿಟ್ಮ್ಯಾನ್ ಇದುವರೆಗೆ 125 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ವೇಳೆ 155 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 3313 ರನ್ ಗಳಿಸಿದ್ದಾರೆ. ಈ ವೇಳೆ 4 ಶತಕಗಳನ್ನು ಕೂಡ ಸಿಡಿಸಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.