IPL 2022: ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ ಮೂವರು ಬ್ಯಾಟರ್​ಗಳು ಇವರೇ..!

| Updated By: ಪೃಥ್ವಿಶಂಕರ

Updated on: May 02, 2022 | 7:06 PM

IPL 2022: ಐಪಿಎಲ್‌ನಲ್ಲಿ ಹೆಚ್ಚಾಗಿ ಸಿಕ್ಸರ್‌ಗಳಿಗೆ ಹೆಸರುವಾಸಿಯಾಗಿದೆ ಅನೇಕ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸುವುದರಲ್ಲಿ ಪರಿಣತರಾಗಿದ್ದಾರೆ. ಅಲ್ಲದೆ ಒಂದೇ ಓವರ್‌ನಲ್ಲಿ ಹಲವು ಸಿಕ್ಸರ್‌ಗಳು ಸಿಡಿಯುವುದು ಆಗಾಗ ನಡೆಯುತ್ತಿರುತ್ತದೆ.

IPL 2022: ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ ಮೂವರು ಬ್ಯಾಟರ್​ಗಳು ಇವರೇ..!
ಕ್ರಿಸ್ ಗೇಲ್, ರವೀಂದ್ರ ಜಡೇಜಾ, ರಾಹುಲ್ ತೆವಾಟಿಯಾ
Follow us on

ಐಪಿಎಲ್ (IPL) ಇತಿಹಾಸದಲ್ಲಿ ಅನೇಕ ಶ್ರೇಷ್ಠ ಮತ್ತು ಅಸಾಧಾರಣ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಕೆಲವು ಬ್ಯಾಟ್ಸ್‌ಮನ್‌ಗಳು ಸತತವಾಗಿ ಹಲವು ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅಂತಹ ಅನೇಕ ಅದ್ಭುತ ಇನ್ನಿಂಗ್ಸ್​ಗಳಿಂದ ಹಲವು ದಾಖಲೆಗಳನ್ನು ನಾವು ಇಂದು ನೋಡುತ್ತಿದ್ದೇವೆ. ಐಪಿಎಲ್ ಪಂದ್ಯಗಳು ಹೆಚ್ಚಾಗಿ ಹೆಚ್ಚಿನ ಸ್ಕೋರಿಂಗ್ ಆಗಿರುವುದಲ್ಲದೆ ಅವುಗಳು ಸಾಕಷ್ಟು ಬೌಂಡರಿಗಳು ಮತ್ತು ಸಿಕ್ಸರ್‌ಗಳಿಂದ ಕೂಡಿರುತ್ತವೆ. ಐಪಿಎಲ್ ಇತಿಹಾಸದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳಿಗೆ ಹೆಸರುವಾಸಿಯಾದ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಮೋಕಿ ಶೈಲಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಬಹುತೇಕ ಪ್ರತಿ ಕ್ರೀಡಾ ಋತುವಿನಲ್ಲಿ ತಮ್ಮ ಬ್ಯಾಟ್‌ನಿಂದ ಅನೇಕ ಪ್ರಚಂಡ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಐಪಿಎಲ್‌ನಲ್ಲಿ ಹೆಚ್ಚಾಗಿ ಸಿಕ್ಸರ್‌ಗಳಿಗೆ ಹೆಸರುವಾಸಿಯಾಗಿದೆ ಅನೇಕ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸುವುದರಲ್ಲಿ ಪರಿಣತರಾಗಿದ್ದಾರೆ. ಅಲ್ಲದೆ ಒಂದೇ ಓವರ್‌ನಲ್ಲಿ ಹಲವು ಸಿಕ್ಸರ್‌ಗಳು ಸಿಡಿಯುವುದು ಆಗಾಗ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಒಂದು ಓವರ್‌ನಲ್ಲಿ 2-3 ಸಿಕ್ಸರ್‌ಗಳನ್ನು ಬಾರಿಸುವುದು ಸ್ವಲ್ಪ ಸುಲಭ. ಆದರೆ ಒಬ್ಬ ಬ್ಯಾಟ್ಸ್‌ಮನ್ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಹೊಡೆದಾಗ ಅದು ತುಂಬಾ ಆಶ್ಚರ್ಯಕರವಾಗಿರುವುದಲ್ಲದೆ ಅಭಿಮಾನಿಗಳನ್ನು ಹುಚ್ಚೆದು ಕುಣಿಯುವಂತೆ ಮಾಡುತ್ತದೆ.

ಈ ಲೇಖನದಲ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ 3 ಆಟಗಾರರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ರಾಹುಲ್ ತೆವಾಟಿಯಾ vs ಶೆಲ್ಡನ್ ಕಾಟ್ರೆಲ್, IPL 2020
ಐಪಿಎಲ್ 13 ನೇ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಲ್ ರೌಂಡರ್ ರಾಹುಲ್ ತೆವಾಟಿಯಾ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ್ದರು. 224 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ, ಸ್ಟೀವ್ ಸ್ಮಿತ್ ಅವರ ವಿಕೆಟ್ ಪತನದ ನಂತರ ರಾಹುಲ್ ತೆವಾಟಿಯಾ ಅವರನ್ನು ಪಿಂಚ್ ಹಿಟ್‌ಗೆ ಕಳುಹಿಸಿತ್ತು.

ಆದರೆ, ಮೊದಲ 20 ಎಸೆತಗಳಲ್ಲಿ ರಾಹುಲ್ ತೆವಾಟಿಯಾ ಅವರ ಬ್ಯಾಟ್‌ ಸೈಲೆಂಟಾಗಿತ್ತು. ಇದಕ್ಕೆ ಪೂರಕವೆಂಬಂತೆ ಅವರ ಸ್ಟ್ರೈಕ್ ರೇಟ್ 50 ಕ್ಕಿಂತ ಕಡಿಮೆ ಇತ್ತು. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರಾಹುಲ್ ತೆವಾಟಿಯಾ ಸಾಕಷ್ಟು ಡಾಟ್ ಬಾಲ್ ಆಡುತ್ತಿದ್ದರು. ಹೀಗಿರುವಾಗ ತೆವಾಟಿಯಾ ಅವರನ್ನು ಮೊದಲು ಕಳುಹಿಸಿ ರಾಜಸ್ಥಾನ್ ರಾಯಲ್ಸ್ ದೊಡ್ಡ ತಪ್ಪು ಮಾಡಿದೆಯೇ ಎಂದು ಹಲವರು ಪ್ರಶ್ನಿಸತೊಡಗಿದರು. ಅಲ್ಲದೆ ರಾಬಿನ್ ಉತ್ತಪ್ಪ ಡಗೌಟ್‌ನಲ್ಲಿದ್ದಾಗ ಈ ಪ್ರಶ್ನೆಗೆ ಹೆಚ್ಚು ಪುಷ್ಠಿ ನೀಡುತ್ತಿತ್ತು.

ಆದರೆ, ಇಷ್ಟೆಲ್ಲ ಆದರೂ ತಾಳ್ಮೆ ಕಳೆದುಕೊಳ್ಳದ ರಾಹುಲ್ ತೆವಾಟಿಯಾ ಕೊನೆಯ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ನೀಡಿದರು. ತೆವಾಟಿಯಾ ಕಾಟ್ರೆಲ್ ಅವರ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಇದರ ಫಲವಾಗಿ ಕೊನೆಯಲ್ಲಿ ರಾಜಸ್ಥಾನ್ ರಾಯಲ್ಸ್ 224 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸ್ ಆಗಿದ್ದು, ತೆವಾಟಿಯಾ ಅವರ 5 ಸಿಕ್ಸರ್​ಗಳು ಇಡೀ ಪಂದ್ಯವನ್ನೇ ತಲೆಕೆಳಗಾಗಿಸಿದವು.

ಕ್ರಿಸ್ ಗೇಲ್ vs ರಾಹುಲ್ ಶರ್ಮಾ, ಐಪಿಎಲ್ 2013
ಕ್ರಿಸ್ ಗೇಲ್ ಐಪಿಎಲ್ ಆರನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದರು. ಆ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಗೇಲ್ ಸೊಗಸಾದ 175 ರನ್​ಗಳ ಇನ್ನಿಂಗ್ಸ್‌ ಆಡಿದರು. ಇದು ಇನ್ನೂ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಗಿದೆ. ಈ ಇನ್ನಿಂಗ್ಸ್‌ನಲ್ಲಿ ಪುಣೆ ವಾರಿಯರ್ಸ್ ತಂಡದ ಸ್ಪಿನ್ನರ್ ರಾಹುಲ್ ಶರ್ಮಾ ಅವರ ಒಂದೇ ಓವರ್‌ನಲ್ಲಿ ಕ್ರಿಸ್ ಗೇಲ್ 5 ಸಿಕ್ಸರ್‌ಗಳನ್ನು ಬಾರಿಸಿದ್ದರು.

ರವೀಂದ್ರ ಜಡೇಜಾ vs ಹರ್ಷಲ್ ಪಟೇಲ್‌, ಐಪಿಎಲ್ 2021
ಕಳೆದ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ ಈ ಸಾಧನೆಯನ್ನು ಮತ್ತೊಮ್ಮೆ ಪುನರಾವರ್ತಿಸಿದರು. ಜಡೇಜಾ ಆರ್‌ಸಿಬಿಯ ಹರ್ಷಲ್ ಪಟೇಲ್‌ಗೆ ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಜಡೇಜಾ 28 ಎಸೆತಗಳಲ್ಲಿ 62 ರನ್ ಗಳಿಸುವ ಮೂಲಕ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:GT vs PBKS Prediction Playing XI: ಬಲಿಷ್ಠ ಗುಜರಾತ್ ಎದುರಿಸಲು ತಂಡದಲ್ಲಿ ಬದಲಾವಣೆ ಮಾಡಲಿದೆ ಪಂಜಾಬ್