BCCI: ಏಕದಿನ ವಿಶ್ವಕಪ್‌ಗೆ 20 ಆಟಗಾರರ ಆಯ್ಕೆ; ಮಹತ್ವದ ಸಭೆಯಲ್ಲಿ ಎನ್ಸಿಎಗೆ ವಾರ್ನಿಂಗ್ ನೀಡಿದ ಬಿಸಿಸಿಐ
Team India Review Meeting: ಈ ವರ್ಷ ಭಾರತದಲ್ಲಿಯೇ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್, ಆಟಗಾರರ ಲಭ್ಯತೆ, ಕೆಲಸದ ಹೊರೆ ನಿರ್ವಹಣೆ ಮತ್ತು ಫಿಟ್‌ನೆಸ್ ಮಾಪಕಗಳಂತಹ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ 7 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಹೊಸ ವರ್ಷದ ಮೊದಲ ದಿನದಂದೆ ಟೀಂ ಇಂಡಿಯಾದ ನಾಯಕ ಹಾಗೂ ಕೋಚ್ ಸೇರಿದಂತೆ ಇನ್ನೂ ಕೆಲವರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಸಿದ ಬಿಸಿಸಿಐ (BCCI) ಭವಿಷ್ಯದ ತಂಡವನ್ನು ಕಟ್ಟುವ ಸಲುವಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಾಸ್ತವವಾಗಿ 2022 ರಲ್ಲಿ ಟೀಂ ಇಂಡಿಯಾದ (Team India) ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಅಲ್ಲದೆ ಟಿ20 ವಿಶ್ವಕಪ್ನಲ್ಲೂ (T20 World Cup) ಟೀಂ ಇಂಡಿಯಾ ಚಾಂಪಿಯನ್ ಆಗಲಿಲ್ಲ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ವಿಶ್ವ ಕ್ರಿಕೆಟ್ನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಬಿಸಿಸಿಐಗೆ ಈ ಸೋಲು ಭಾರಿ ಮುಜುಗರ ತಂದಿತ್ತು. ಹೀಗಾಗಿ ವಿಶ್ವಕಪ್ ಮುಗಿದ ಬಳಿಕ ತಂಡದ ನಾಯಕ ರೋಹಿತ್ ಶರ್ಮಾ (Rohit Sharma), ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ತಂಡದ ಪ್ರದರ್ಶನದ ಬಗ್ಗೆ ಪರಾಮರ್ಶೆ ಮಾಡಲು ಮಂಡಳಿ ನಿರ್ಧರಿಸಿತ್ತು. ಅದರಂತೆ ಇಂದು ಮಹತ್ವದ ಸಭೆ ನಡೆಸಿರುವ ಬಿಸಿಸಿಐ ತಂಡದ ಬಗ್ಗೆ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಆರಂಭಿಸಿತ್ತು. ಇದಕ್ಕೆ ಪೂರಕವಾಗಿ ಈ ಹೊಸ ವರ್ಷದಿಂದ ಟಿ20 ತಂಡದ ನಾಯಕತ್ವವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಕ್ಕೆ ವಹಿಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿಗಳು ಹೊರಬರಲಾರಂಭಿಸಿದ್ದವು. ಇದೀಗ ಲಂಕಾ ವಿರುದ್ಧದ ಟಿ20 ಸರಣಿಗೆ ಪ್ರಕಟವಾಗಿರುವ ತಂಡದ ನಾಯಕತ್ವವನ್ನು ಪಾಂಡ್ಯಗೆ ವಹಿಸಲಾಗಿದೆ. ನಾಯಕತ್ವದ ಬದಲಾವಣೆಯೊಂದಿಗೆ ಆಟಗಾರರ ಫಿಟ್‌ನೆಸ್ ಮತ್ತು ಅವರು ಆಗಾಗ್ಗೆ ವಿರಾಮ ತೆಗೆದುಕೊಳ್ಳುವ ಬಗ್ಗೆಯೂ ಪರಿಣಿತರು ಪ್ರಶ್ನೆಗಳನ್ನು ಎತ್ತಿದ್ದರು. ದೇಶದ ಪರ ಆಡುವಾಗ ಕೆಲಸದ ಹೊರೆ ಕಾರಣವನ್ನು ನೀಡುವ ಆಟಗಾರರು, ಐಪಿಎಲ್‌ನಂತಹ ಪಂದ್ಯಾವಳಿಗಳಲ್ಲಿ ಮಾತ್ರ ಇಡೀ ಸೀಸನ್ ಆಡುತ್ತಾರೆ ಎಂದು ಹಿರಿಯ ಕ್ರಿಕೆಟಿಗರು ದೂರಿದ್ದರು. ಇದೆಲ್ಲ ಬೆಳವಣಿಗೆಗಳನ್ನು ಗಮನಿಸಿದ್ದ ಬಿಸಿಸಿಐ ಇಂದಿನ ಸಭೆಯಲ್ಲಿ ಇಂತಹ ಸಮಸ್ಯೆಗಳಿಗೆ ಕೆಲವು ಪರಿಹಾರಗಳನ್ನು ಕಂಡುಕೊಂಡಿದೆ.
ಟೀಂ ಇಂಡಿಯಾ ಕ್ರಿಕೆಟಿಗರ ಹೊಸ ವರ್ಷದ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ಫೋಟೋ ನೋಡಿ
ವಿಶ್ವಕಪ್, ಆಯ್ಕೆ ಮತ್ತು ಕೆಲಸದ ಹೊರೆ ಕುರಿತು ಚರ್ಚೆ
ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ಬಿಸಿಸಿಐ, ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿತು. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ಬಿಸಿಸಿಐ ಪತ್ರಿಕಾ ಪ್ರಕಟಣೆಯ ಮೂಲಕ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದೆ.
ಈ ಸಭೆಯಲ್ಲಿ, ಈ ವರ್ಷ ಭಾರತದಲ್ಲಿಯೇ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್, ಆಟಗಾರರ ಲಭ್ಯತೆ, ಕೆಲಸದ ಹೊರೆ ನಿರ್ವಹಣೆ ಮತ್ತು ಫಿಟ್‌ನೆಸ್ ಮಾಪಕಗಳಂತಹ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ 7 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬಿಸಿಸಿಐನ 3 ಮಹತ್ವದ ನಿರ್ಧಾರಗಳು
- 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ 20 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ.
- ಇದರೊಂದಿಗೆ 2023 ರಲ್ಲಿ ಭಾರತ ಆಡಲಿರುವ ಮುಂದಿನ 35 ಏಕದಿನ ಪಂದ್ಯಗಳಲ್ಲಿ ಈಗ ಆಯ್ಕೆಯಾಗಿರುವ 20 ಆಟಗಾರರನ್ನೇ ರೊಟೆಷನ್ ಪಾಲಿಸಿಯ ಮೂಲಕ ತಂಡದಲ್ಲಿ ಆಡಿಸಲಾಗುತ್ತದೆ.
- ಅಲ್ಲದೆ ಎಲ್ಲಾ ಮೂರು ಫಾರ್ಮ್ಯಾಟ್ನಲ್ಲೂ ಆಡುವ ಆಟಗಾರರ ಫಿಟ್ನೆಸ್ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ.
- ಹೀಗಾಗಿ ಆಟಗಾರರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡುವಂತೆ ವಿವಿಎಸ್ ಲಕ್ಷ್ಮಣ್ ನೇತೃತ್ವದ ಎನ್ಸಿಎಗೆ, ಬಿಸಿಸಿಐ ಸೂಚನೆ ನೀಡಿದೆ.
- ಇನ್ನು ಮುಂದೆ ಉದಯೋನ್ಮುಖ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ (ಟೀಂ ಇಂಡಿಯಾದಲ್ಲಿ) ಆಯ್ಕೆಗೆ ಅರ್ಹರಾಗಲು ಸಾಕಷ್ಟು ದೇಶೀಯ ಪಂದ್ಯಾವಳಿಗಳನ್ನು ಆಡಬೇಕು.
- ಅಲ್ಲದೆ ಯೋ–ಯೋ ಟೆಸ್ಟ್ ಮತ್ತು ಡೆಕ್ಸ ( DEXA- Dual energy X-ray absorptiometry (ಇದು ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್-ರೇ ಪರೀಕ್ಷೆಯಾಗಿದೆ.) ಸ್ಕ್ಯಾನ್ ಇನ್ನು ಮುಂದೆ ಆಯ್ಕೆಯ ಭಾಗವಾಗಲಿದೆ. ಹಾಗೆಯೇ ಸೆಂಟ್ರಲ್ ಪೂಲ್ ಆಟಗಾರರ (ಕೇಂದ್ರೀಯ ಗುತ್ತಿಗೆ ಆಟಗಾರರು) ಕಸ್ಟಮೈಸ್ ಮಾಡಿದ ಮಾರ್ಗಸೂಚಿಯನ್ನು (ಪಾತ್ರ ಮತ್ತು ಅವಶ್ಯಕತೆಯ ಪ್ರಕಾರ) ಆಧರಿಸಿ ಕಾರ್ಯಗತಗೊಳಿಸಲಾಗುತ್ತದೆ.
- ಇವುಗಳ ಜೊತೆಗೆ ಟೀಂ ಇಂಡಿಯಾದ (ಪುರುಷರ ತಂಡದ) ಮುಂಬರುವ ಸರಣಿಗಳು ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಐಪಿಎಲ್ 2023 ರಲ್ಲಿ ಆಯ್ದ ಭಾರತೀಯ ಆಟಗಾರರ ಭಾಗವಹಿಸುವಿಕೆಯನ್ನು ಮೇಲ್ವಿಚಾರಣೆ ಮಾಡಲು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ನಿಕಟವಾಗಿ ಕೆಲಸ ಮಾಡಲಿದೆ.
ಅಂದರೆ, ಈಗ ಟೀಂ ಇಂಡಿಯಾಕ್ಕೆ ಎಂಟ್ರಿಕೊಡಲು ಎದುರು ನೋಡುತ್ತಿರುವ ಯುವ ಆಟಗಾರರು ಕೇವಲ ಐಪಿಎಲ್ನಲ್ಲಿ ನೀಡುವ ಪ್ರದರ್ಶನ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ನೀಡುವ ಪ್ರದರ್ಶನದ ಮೇಲೆ ತಂಡಕ್ಕೆ ಎಂಟ್ರಿಕೊಡುವ ನಿರೀಕ್ಷೆ ಇಟ್ಟುಕೊಳ್ಳುವ ಹಾಗಿಲ್ಲ. ಇದರ ಜೊತೆಗೆ ಅವರು ಸಂಪೂರ್ಣ ಫಿಟ್ ಆಗಿರುವುದರೊಂದಿಗೆ ಆಯ್ಕೆಗೂ ಮುನ್ನ ನೆಡೆಸುವ ಫಿಟ್ನೆಸ್ ಪರೀಕ್ಷೆಯಲ್ಲೂ ಕಡ್ಡಾಯವಾಗಿ ಪಾಸ್ ಆಗಲೇಬೇಕಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Sun, 1 January 23