
ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರು ಶತಕ ಬಾರಿಸಲಿದ್ದಾರೆ ಎಂಬುದೇ ಈಗ ಕುತೂಹಲ. ಏಕೆಂದರೆ ಈ ಮೈದಾನದಲ್ಲಿ ಭಾರತೀಯ ಬ್ಯಾಟರ್ರೊಬ್ಬರು ಶತಕ ಸಿಡಿಸಿ ಬರೋಬ್ಬರಿ 35 ವರ್ಷಗಳು ಕಳೆದಿವೆ ಎಂದರೆ ನಂಬಲೇಬೇಕು. ಅಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಕೊನೆಯ ಬಾರಿ ಸೆಂಚುರಿ ಬಾರಿಸಿದ್ದು 1990 ರಲ್ಲಿ. ಅದು ಸಚಿನ್ ತೆಂಡೂಲ್ಕರ್. ಆಗ ಅವರಿಗೆ ಪ್ರಾಯ ಕೇವಲ 17 ವರ್ಷ.
ಇದಾದ ಬಳಿಕ ಖುದ್ದು ಸಚಿನ್ ತೆಂಡೂಲ್ಕರ್ಗೂ ಕೂಡ ಓಲ್ಡ್ ಟ್ರಾಫೋರ್ಡ್ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇತ್ತ ಶತಕಗಳ ಸರದಾರ ವಿರಾಟ್ ಕೊಹ್ಲಿಗೂ ಕೂಡ ಈ ಮೈದಾನದಲ್ಲಿ ಮೂರಂಕಿ ಮೊತ್ತ ಗಳಿಸಿಲ್ಲ. ಹೀಗಾಗಿಯೇ ಈ ಬಾರಿ ಸೆಂಚುರಿ ಸಿಡಿಸುವ ಸರದಾರ ಯಾರೆಂಬ ಕುತೂಹಲ ಎಲ್ಲರಲ್ಲಿದೆ.
ಓಲ್ಡ್ ಟ್ರೋಫರ್ಡ್ ಮೈದಾನದಲ್ಲಿ ಇಲ್ಲಿಯವರೆಗೆ ಕೇವಲ 8 ಭಾರತೀಯ ಬ್ಯಾಟ್ಸ್‌ಮನ್‌ಗಳು ಮಾತ್ರ ಶತಕ ಬಾರಿಸಿದ್ದಾರೆ. 1936 ರಲ್ಲಿ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಮರ್ಚೆಂಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿದ್ದರು. ಅಲಿ 112 ರನ್ ಗಳಿಸಿದರೆ, ಮರ್ಚೆಂಟ್ 114 ರನ್ ಬಾರಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಆ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
ಆ ನಂತರ 1959 ರಲ್ಲಿ, ಅಬ್ಬಾಸ್ ಅಲಿ ಬೇಗ್ ಇದೇ ಮೈದಾನದಲ್ಲಿ ಸೆಂಚುರಿ ಸಿಡಿಸಿದ್ದರು. 1959 ರಲ್ಲಿ ಪಾಲಿ ಉಮ್ರಿಗರ್, 1974 ರಲ್ಲಿ ಸುನಿಲ್ ಗವಾಸ್ಕರ್, 1982 ರಲ್ಲಿ ಸಂದೀಪ್ ಪಾಟೀಲ್, 1990 ರಲ್ಲಿ ಮೊಹಮ್ಮದ್ ಅಝರುದ್ದೀನ್ ಹಾಗೂ ಸಚಿನ್ ತೆಂಡೂಲ್ಕರ್ ಸೆಂಚುರಿಗಳನ್ನು ಸಿಡಿಸಿದ್ದರು. ಇದಾದ ಬಳಿಕ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ಗೆ ಇಲ್ಲಿ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಿಲ್ಲ.
ಆದರೆ ಈ ಬಾರಿ ಭಾರತೀಯ ಬ್ಯಾಟರ್ಗಳು ಇಂಗ್ಲೆಂಡ್ನಲ್ಲಿ ಪರಾಕ್ರಮ ಮೆರೆಯುತ್ತಿದ್ದಾರೆ. ಅದರಲ್ಲೂ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಶುಭ್ಮನ್ ಗಿಲ್ ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಹೀಗಾಗಿ ಈ ಬಾರಿ ಓಲ್ಡ್ ಟ್ರಾಫೋರ್ಡ್ನಲ್ಲೂ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಶತಕವೊಂದನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ಬರೋಬ್ಬರಿ 1202 ದಿನಗಳು… ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆ
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಈವರೆಗೆ 9 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 4 ಮ್ಯಾಚ್ಗಳಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಇನ್ನು 5 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ. ಅಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿ ಭಾರತೀಯ ಪಡೆ ಗೆದ್ದರೆ ಹೊಸ ಇತಿಹಾಸ ಕೂಡ ನಿರ್ಮಾಣವಾಗಲಿದೆ.