AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯವೀರ್ ಸೆಹ್ವಾಗ್ ಸಿಡಿಲಬ್ಬರ: ದೆಹಲಿ ತಂಡಕ್ಕೆ ಭರ್ಜರಿ ಜಯ

Aaryavir Sehwag: ಭಾರತ ತಂಡದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರ ಸುಪುತ್ರ ಆರ್ಯವೀರ್ ಸೆಹ್ವಾಗ್ ಈಗಾಗಲೇ ಡೆಲ್ಲಿ ಪ್ರೀಮಿಯರ್ ಲೀಗ್​ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅಂಡರ್-19 ಆಟಗಾರರ ಕೂಚ್ ಬೆಹಾರ್ ಟೂರ್ನಿಯಲ್ಲೂ ಕಣಕ್ಕಿಳಿಯುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಆರ್ಯವೀರ್ ಸೆಹ್ವಾಗ್ ಸಿಡಿಲಬ್ಬರ:  ದೆಹಲಿ ತಂಡಕ್ಕೆ ಭರ್ಜರಿ ಜಯ
Aaryavir Sehwag
ಝಾಹಿರ್ ಯೂಸುಫ್
|

Updated on:Nov 18, 2025 | 5:59 PM

Share

ಕೂಚ್ ಬೆಹಾರ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ದೆಹಲಿ ತಂಡ ಅಮೋಘ ಜಯ ಸಾಧಿಸಿದೆ. ನ್ಯೂ ದೆಹಲಿಯ ಏರ್​ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ಹಾಗೂ ಬಿಹಾರ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಆರಾಧ್ಯ ಚಾವ್ಲಾ ಕೇವಲ 4 ರನ್​ಗಳಿಸಿ ಔಟಾದರು. ಇದರ ಬೆನ್ನಲ್ಲೇ ತನ್ಮಯ್ ಚೌಧರಿ (0) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಆರ್ಯವೀರ್ ಸೆಹ್ವಾಗ್ ಹಾಗೂ ನಾಯನ ಪ್ರಣವ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಅದರಲ್ಲೂ ಬಿರುಸಿನ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ಆರ್ಯವೀರ್ 120 ಎಸೆತಗಳಲ್ಲಿ 14 ಫೋರ್​ಗಳೊಂದಿಗೆ 72 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ದೆಹಲಿ ತಂಡ ಮೊದಲ ಇನಿಂಗ್ಸ್​ನಲ್ಲಿ 278 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬಿಹಾರ್ ತಂಡಕ್ಕೆ ಯುವ ವೇಗಿ ಲಕ್ಷ್ಮಣ್ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಬಿಹಾರ್ ತಂಡವು ಕೇವಲ 125 ರನ್​​ಗಳಿಸಿ ಆಲೌಟ್ ಆಯಿತು. ದೆಹಲಿ ಪರ 12 ಓವರ್​ಗಳನ್ನು ಎಸೆದ ಲಕ್ಷ್ಮಣ್ ಕೇವಲ 45 ರನ್ ನೀಡಿ 7 ವಿಕೆಟ್ ಪಡೆದರು.

ಬಿಹಾರ್ ತಂಡವು ಅಲ್ಪ ಮೊತ್ತಕ್ಕೆ ಕುಸಿದಿದ್ದರಿಂದ ದೆಹಲಿ ಫಾಲೋಆನ್ ಹೇರಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಿಹಾರ್ ತಂಡವು 205 ರನ್​ಗಳಿಸಿ ಆಲೌಟ್ ಆದರು. ಈ ಬಾರಿ ಕೂಡ ಲಕ್ಷ್ಮಣ್ 4 ವಿಕೆಟ್ ಪಡೆದು ಮಿಂಚಿದರು.

ಮೊದಲ ಇನಿಂಗ್ಸ್​ನಲ್ಲಿನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 53 ರನ್​ಗಳ ಗುರಿ ಪಡೆದ ದೆಹಲಿ ಪರ ಆರ್ಯವೀರ್ ಸೆಹ್ವಾಗ್ 45 ಎಸೆತಗಳಲ್ಲಿ 4 ಫೋರ್​ಗಳೊಂದಿಗೆ ಅಜೇಯ 27 ರನ್ ಬಾರಿಸಿದರು. ಈ ಮೂಲಕ ದೆಹಲಿ ತಂಡ 15.2 ಓವರ್​ಗಳಲ್ಲಿ 53 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ಟೆಸ್ಟ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಆರ್ಯವೀರ್ 99 ರನ್​ ಸಿಡಿಸಿ ಮಿಂಚಿದರೆ, ಲಕ್ಷ್ನಣ್ 11 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ದೆಹಲಿ ಗೆಲುವಿನಲ್ಲಿ ಆರ್ಯವೀರ್ ಹಾಗೂ ಲಕ್ಷ್ಮಣ್ ಪ್ರಮುಖ ಪಾತ್ರವಹಿಸಿದರು.

Published On - 5:58 pm, Tue, 18 November 25