
ಐಪಿಎಲ್ ಸೀಸನ್ 15ನ (IPL 2022) ಮೊದಲ ಪಂದ್ಯದಲ್ಲಿ ಆರ್ಸಿಬಿ (RCB) ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ (Virat Kohli) ಅಬ್ಬರಿಸಿದ್ದರು. ಅದರಲ್ಲೂ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಕೊಹ್ಲಿ ಕೇವಲ 29 ಎಸೆತಗಳಲ್ಲಿ 41 ಸಿಡಿಸಿದ್ದರು. ಇದೀಗ ಈ ಬಾರಿ ಕೊಹ್ಲಿಯನ್ನು ಕಟ್ಟಿಹಾಕಲು ಬೌಲರ್ಗಳಿಗೆ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (AB DE VILLIERS). ಐಪಿಎಲ್ ಸೀಸನ್ 15 ಬಗ್ಗೆ ಮಾತನಾಡಿರುವ ಎಬಿಡಿ, ಈ ಸೀಸನ್ ನಲ್ಲಿ ಕೊಹ್ಲಿ 600 ಕ್ಕೂ ಹೆಚ್ಚು ರನ್ ಗಳಿಸಲಿದ್ದಾರೆ. ಅವರನ್ನು ನಿಯಂತ್ರಿಸುವುದು ಬೌಲರ್ಗಳಿಗೆ ಸವಾಲಾಗಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿಈ ಸೀಸನ್ನಲ್ಲಿ ತಂಡದ ನಾಯಕನಲ್ಲ. ಇದರಿಂದ ಅವರ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ಹೀಗಾಗಿ ಅವರು ನಿರಾಯಾಸವಾಗಿ ಬ್ಯಾಟಿಂಗ್ ಮಾಡಬೇಕಷ್ಟೇ. ಹಾಗಾಗಿ ವಿರಾಟ್ ಕೊಹ್ಲಿ ಈ ಸಲ ಸಾಕಷ್ಟು ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ವರ್ಷ ಅವರ ಬ್ಯಾಟ್‌ನಿಂದ 600ಕ್ಕೂ ಹೆಚ್ಚು ರನ್ ಹರಿದು ಬರಲಿದೆ ಎಂಬ ನಿರೀಕ್ಷೆಯಿದೆ ಎಂದು ಎಬಿಡಿ ತಿಳಿಸಿದ್ದಾರೆ.
2016ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಆ ವೇಳೆ 4 ಶತಕಗಳನ್ನು ಬಾರಿಸಿದ್ದರು. ಇದು ಐಪಿಎಲ್ನ ದಾಖಲೆಯಾಗಿದೆ. ಹೀಗಾಗಿ ಈ ಬಾರಿ ವಿರಾಟ್ ಕೊಹ್ಲಿ 600ಕ್ಕೂ ಹೆಚ್ಚು ರನ್ ಗಳಿಸುವುದು ಕಷ್ಟವೇನಲ್ಲ. ಅದರಂತೆ ಈ ಬಾರಿ ಕೇವಲ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಲಿರುವ ವಿರಾಟ್ ಕೊಹ್ಲಿ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.
ಐಪಿಎಲ್‌ನಲ್ಲಿ (IPL Records) ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆಗಳು:
ಅತೀ ಹೆಚ್ಚು ರನ್: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇದುವರೆಗೆ ಐಪಿಎಲ್‌ನಲ್ಲಿ 207 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 199 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ ಬರೋಬ್ಬರಿ 6283 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಐಪಿಎಲ್‌ನಲ್ಲಿ 6 ಸಾವಿರ ರನ್ ಪೂರೈಸಿದ ಏಕೈಕ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.
ಅತ್ಯಧಿಕ ರನ್ ಬಾರಿಸಿದ ಕ್ಯಾಪ್ಟನ್: ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ನಾಯಕ. ಅಂದರೆ 2013 ರಿಂದ 2021 ರವರೆಗೆ ಆರ್ಸಿಬಿ ತಂಡದ ನಾಯಕರಾಗಿದ್ದ ಕೊಹ್ಲಿ 4881 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.
ಅತ್ಯಧಿಕ ಶತಕ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಇದುವರೆಗೆ 5 ಶತಕಗಳನ್ನು ಸಿಡಿಸಿದ್ದಾರೆ.
ಅತ್ಯಧಿಕ ರನ್: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016 ರಲ್ಲಿ 973 ರನ್ ಕಲೆಹಾಕುವ ಮೂಲಕ ಈ ದಾಖಲೆ ಬರೆದಿದ್ದರು.
ಅತ್ಯಧಿಕ ಸಿಕ್ಸ್: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ 2016 ರಲ್ಲಿ 38 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು