ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ದ್ವಿತಿಯಾರ್ಧ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ (MI) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಣ ಮುಖಾಮುಖಿಯೊಂದಿಗೆ ಐಪಿಎಲ್ನ (IPL) ಎರಡನೇ ಹಂತಕ್ಕೆ ಚಾಲನೆ ದೊರೆಯಲಿದೆ. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಕೆಕೆಆರ್ (KKR) ವಿರುದ್ದ ಆಡಲಿದೆ. ಇದಕ್ಕಾಗಿ ಆರ್ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಆರ್ಸಿಬಿ ಬಳಗವು RCB A ಮತ್ತು RCB B ತಂಡಗಳಾಗಿ ವಿಂಗಡನೆಗೊಂಡು ಅಭ್ಯಾಸದಲ್ಲಿ ನಿರತರಾಗಿವೆ. ಅದರಂತೆ ನಡೆದ ಮೊದಲ ಇನ್ಟ್ರಾಸ್ಕ್ವಾಡ್ ಪಂದ್ಯದಲ್ಲಿ ಹರ್ಷಲ್ ಪಟೇಲ್ ನೇತೃತ್ವದ RCB A ತಂಡವು ದೇವದತ್ ಪಡಿಕ್ಕಲ್ ಮುನ್ನಡೆಸಿದ B ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಎಬಿ ಡಿವಿಲಿಯರ್ಸ್ ತನ್ನ ಪುನರಾಗಮನವನ್ನು ಸಾರಿದ್ದಾರೆ.
ಮೊದಲು ಬ್ಯಾಟ್ ಮಾಡಿದ RCB A ತಂಡಕ್ಕೆ ಎಬಿಡಿ ನೆರವಾದರು. ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿವಿಲಿಯರ್ಸ್ ಬಿ ತಂಡದಲ್ಲಿದ್ದ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ ಎಬಿಡಿ ಬ್ಯಾಟ್ನಿಂದ ಸಿಡಿದದ್ದು 10 ಸಿಕ್ಸರ್ ಹಾಗೂ 7 ಬೌಂಡರಿಗಳು. ಅದರಂತೆ ಕೇವಲ 46 ಎಸೆತಗಳಲ್ಲಿ ಡಿವಿಲಿಯರ್ಸ್ 104 ರನ್ ಚಚ್ಚಿದರು. ಮತ್ತೊಂದೆಡೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಅಜರುದ್ದೀನ್ ಎಬಿಡಿಗೆ ಉತ್ತಮ ಸಾಥ್ ನೀಡಿದರು. 43 ಎಸೆತಗಳನ್ನು ಎದುರಿಸಿದ ಅಜರ್ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 66 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ RCB A ತಂಡದ ಸ್ಕೋರ್ 213ಕ್ಕೆ ಬಂದು ನಿಂತಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. 21 ಎಸೆತಗಳಲ್ಲಿ 36 ರನ್ ಬಾರಿಸಿದ ಪಡಿಕ್ಕಲ್ ಭದ್ರ ಬುನಾದಿ ಹಾಕಿಕೊಟ್ಟರು. ಇದರ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಕೆಎಸ್ ಭರತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 47 ಎಸೆತಗಳಲ್ಲಿ 95 ರನ್ ಬಾರಿಸುವ ಮೂಲಕ ಭರತ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅದರಂತೆ RCB B ತಂಡವು 7 ವಿಕೆಟ್ಗಳ ಜಯ ಸಾಧಿಸಿತು. ಈ ಪಂದ್ಯದೊಂದಿಗೆ ಆರ್ಸಿಬಿ ಬ್ಯಾಟ್ಸ್ಮನ್ಗಳು ತಮ್ಮ ಫಾರ್ಮ್ ಅನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಅಜರ್ ಹಾಗೂ ಭರತ್ ಅಬ್ಬರಿಸಿರುವುದು ಆರ್ಸಿಬಿ ಪಾಲಿಗೆ ಶುಭ ಸೂಚನೆ ಎನ್ನಬಹುದು.
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ
ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!
ಇದನ್ನೂ ಓದಿ: Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!
(AB de Villiers slams a cracking century in RCB’s intra-squad practice match)
Published On - 2:31 pm, Wed, 15 September 21