U19 Asia Cup 2021: ಶ್ರೀಲಂಕಾವನ್ನು ಮಣಿಸಿ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ಯುವಪಡೆ..!
U19 Asia Cup 2021: ಯುಎಇಯಲ್ಲಿ ನಡೆದ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ಜಯದ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಯಶ್ ಧುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅಂಡರ್-19 ಏಷ್ಯಾಕಪ್ ಗೆದ್ದುಕೊಂಡಿದೆ.
ಯುಎಇಯಲ್ಲಿ ನಡೆದ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ಜಯದ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಯಶ್ ಧುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅಂಡರ್-19 ಏಷ್ಯಾಕಪ್ ಗೆದ್ದುಕೊಂಡಿದೆ. ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಮಳೆ ಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 38 ಓವರ್‌ಗಳಲ್ಲಿ 106 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಭಾರತ ತಂಡವು 38 ಓವರ್‌ಗಳಲ್ಲಿ 102 ರನ್‌ಗಳ ಗುರಿಯನ್ನು ಪಡೆದುಕೊಂಡಿತು, ಅದನ್ನು ಆಂಗ್‌ಕ್ರಿಶ್ ರಘುವಂಶಿ ಮತ್ತು ಶೇಖ್ ರಶೀದ್ ಅವರ ಅತ್ಯುತ್ತಮ ಬ್ಯಾಟಿಂಗ್ ಆಧಾರದ ಮೇಲೆ ಸಾಧಿಸಿದರು.
ಭಾರತ ತಂಡದ ಗೆಲುವಿಗೆ ಬೌಲರ್ಗಳು ಪ್ರಮುಖ ಕಾಣಿಗೆ ನೀಡಿದರು. ಅದರಲ್ಲೂ ಎಡಗೈ ಸ್ಪಿನ್ನರ್ ವಿಕ್ಕಿ ಒಸ್ತ್ವಾಲ್ ಹಾಗೂ ಆಫ್ ಸ್ಪಿನ್ನರ್ ಕೌಶಲ್ ತಾಂಬೆ ಶ್ರೀಲಂಕಾ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು. ವಿಕ್ಕಿ ಒಸ್ತ್ವಾಲ್ 8 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಪಡೆದರು. ಜೊತೆಗೆ 3 ಓವರ್ ಮೇಡನ್ ಬೌಲ್ ಮಾಡಿದರು. ಕೌಶಲ್ ತಾಂಬೆ ಕೂಡ 6 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ರಾಜ್ಯವರ್ಧನ್, ರವಿಕುಮಾರ್ ಮತ್ತು ರಾಜ್ ಬಾವಾ ತಲಾ 1 ವಿಕೆಟ್ ಪಡೆದರು.
8ನೇ ಬಾರಿ ಚಾಂಪಿಯನ್ ಆದ ಭಾರತ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡದ ಪ್ರಾಬಲ್ಯ ಮುಂದುವರಿದಿದೆ. ಟೀಂ ಇಂಡಿಯಾ 8ನೇ ಬಾರಿ ಏಷ್ಯಾಕಪ್ ಗೆದ್ದುಕೊಂಡಿದೆ. ಭಾರತ ಮೊದಲು 1989 ರಲ್ಲಿ ಈ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಇದಾದ ನಂತರ, 2003 ರಲ್ಲಿ, ಮತ್ತೊಮ್ಮೆ ಚಾಂಪಿಯನ್ ಆಯಿತು. 2012ರಲ್ಲಿ ಪಾಕಿಸ್ತಾನದ ಜತೆ ಟ್ರೋಫಿ ಹಂಚಿಕೊಂಡಿತ್ತು. ಇದಾದ ಬಳಿಕ 2013, 2016ರಲ್ಲಿಯೂ ಭಾರತ ಈ ಟೂರ್ನಿ ಗೆದ್ದಿತ್ತು. 2017 ರಲ್ಲಿ ಅಫ್ಘಾನಿಸ್ತಾನ ಏಷ್ಯನ್ ಚಾಂಪಿಯನ್ ಆಗಿತ್ತು. ಇದೀಗ ಟೀಂ ಇಂಡಿಯಾ 2018, 2019 ಮತ್ತು ಈಗ 2021 ರಲ್ಲಿ ಏಷ್ಯಾಕಪ್ ಚಾಂಪಿಯನ್ ಆಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತದ ಪಯಣ ಟೂರ್ನಿಯಲ್ಲಿ ಭಾರತ 5 ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಮಾತ್ರ ಸೋತಿತ್ತು. ಭಾರತ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಇ ತಂಡವನ್ನು 154 ರನ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಪಾಕಿಸ್ತಾನ ವಿರುದ್ಧ 2 ವಿಕೆಟ್‌ಗಳ ಸೋಲನುಭವಿಸಬೇಕಾಯಿತು. ಇದರ ನಂತರ ಟೀಂ ಇಂಡಿಯಾ ಉತ್ತಮ ಪುನರಾಗಮನವನ್ನು ಮಾಡಿ ಅಫ್ಘಾನಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಏಕಪಕ್ಷೀಯವಾಗಿ 103 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಅಂತಿಮವಾಗಿ ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಿದೆ.
Published On - 6:15 pm, Fri, 31 December 21