Adar Poonawalla
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಮಾಲೀಕರು ಬದಲಾಗುವುದು ಬಹುತೇಕ ಖಚಿತವಾಗಿದೆ. ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದ್ದು, ಇದರ ಬೆನ್ನಲ್ಲೇ ರಾಯಲ್ ಫ್ರಾಂಚೈಸಿ ಖರೀದಿಗೆ ಖ್ಯಾತ ಉದ್ಯಮ ಆದಾರ್ ಪೂನಾವಾಲ ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ ಈ ಬಗ್ಗೆ ಡಿಯಾಜಿಯೋ ಕಂಪೆನಿ ಜೊತೆ ಮಾತುಕತೆ ನಡೆಸಿದ್ದು, ಈ ಮಾತುಕತೆ ಯಶಸ್ವಿಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಪುಣೆ ಮೂಲದ ಉದ್ಯಮಿ ಪಾಲಾಗಲಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಹೊಂದಿದೆ. ಇದೀಗ ಡಿಯಾಜಿಯೋ ಕಂಪೆನಿಯು ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದೆ.
ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಅದು ಕೂಡ ಸುಮಾರು 2 ಬಿಲಿಯನ್ ಡಾಲರ್ಗೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂ.ಗೆ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಲು ಖ್ಯಾತ ಉದ್ಯಮಿ ಆದಾರ್ ಪೂನಾವಾಲ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಮಾತುಕತೆ ಯಶಸ್ವಿಯಾದರೆ, ಐಪಿಎಲ್ನ 19ನೇ ಆವೃತ್ತಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿಯು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಪಾಲಾಗಲಿದೆ.
ಸಂಪೂರ್ಣ ಶೇರು ಮಾರಾಟ:
ಐಪಿಎಲ್ನ ಮಾಜಿ ಅಧ್ಯಕ್ಷರಾದ ಲಲಿತ್ ಮೋದಿ ಅವರ ಮಾಹಿತಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಂಪೂರ್ಣ ಶೇರು ಮಾರಾಟ ಮಾಡಲಿದೆ. ಅಂದರೆ ಆರ್ಸಿಬಿ ಫ್ರಾಂಚೈಸಿಯನ್ನು 17 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: 15 ವರ್ಷಗಳ ಬಳಿಕ ದಿಗ್ಗಜರಿಲ್ಲದೇ ಕಣಕ್ಕಿಳಿದ ಟೀಮ್ ಇಂಡಿಯಾ
ಇತ್ತ ಹಾಲಿ ಐಪಿಎಲ್ ಚಾಂಪಿಯನ್ ಪಟ್ಟದೊಂದಿಗೆ ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಮೌಲ್ಯಯುತ ತಂಡವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಖರೀದಿಗೆ ದೊಡ್ಡ ಉದ್ಯಮ ನಡುವೆ ಪೈಪೋಟಿ ನಡೆಯುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.