AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND U19 vs AUS U19: ಆಸೀಸ್ ನೆಲದಲ್ಲಿ ಸಿಕ್ಸರ್‌ಗಳ ವಿಶ್ವ ದಾಖಲೆ ಮುರಿದ ವೈಭವ್ ಸೂರ್ಯವಂಶಿ

Vaibhav Suryavanshi World Record: ಭಾರತ U19 ತಂಡ ಆಸ್ಟ್ರೇಲಿಯಾ U19 ವಿರುದ್ಧ ಇನ್ನಿಂಗ್ಸ್ ಮತ್ತು 58 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ತಮ್ಮ ಶತಕದಲ್ಲಿ ಬರೋಬ್ಬರಿ 15 ಸಿಕ್ಸರ್‌ಗಳನ್ನು ಸಿಡಿಸಿ ಯೂತ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದರು. ಅವರ ವೇಗದ ಶತಕ ಮತ್ತು ಸಿಕ್ಸರ್‌ಗಳ ಸುರಿಮಳೆ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.

IND U19 vs AUS U19: ಆಸೀಸ್ ನೆಲದಲ್ಲಿ ಸಿಕ್ಸರ್‌ಗಳ ವಿಶ್ವ ದಾಖಲೆ ಮುರಿದ ವೈಭವ್ ಸೂರ್ಯವಂಶಿ
Vaibhav Suryavanshi
ಪೃಥ್ವಿಶಂಕರ
|

Updated on:Oct 02, 2025 | 4:08 PM

Share

ಒಂದೆಡೆ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದ್ದರೆ, ಇನ್ನೊಂದೆಡೆ ಭಾರತ ಅಂಡರ್ 19 ತಂಡವು ಆಸ್ಟ್ರೇಲಿಯಾ ಅಂಡರ್ 19 (India U19 vs Australia U19) ತಂಡವನ್ನು ಅವರ ನೆಲದಲ್ಲೇ ಇನ್ನಿಂಗ್ಸ್ ಮತ್ತು 58 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಭಾರತದ ಈ ಗೆಲುವಿನಲ್ಲಿ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಹಾಗೂ ವೇದಾಂತ್ ತ್ರಿವೇದಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದ ವೈಭವ್ ಯೂತ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತೀಯ ದಾಖಲೆಯನ್ನು ಮಾತ್ರವಲ್ಲದೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ.

ವೈಭವ್ ಸೂರ್ಯವಂಶಿ ಶತಕ

ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಬಹು-ದಿನದ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಅಂಡರ್-19 ತಂಡವು ಭಾರತದ ಅಂಡರ್-19 ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 243 ರನ್ ಗಳಿಸಿತು. ನಂತರ, ಪಂದ್ಯದ ಎರಡನೇ ದಿನದಂದು, ಭಾರತದ ಅಂಡರ್-19 ತಂಡವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಚುರುಕಾದ ಆಟವನ್ನು ಪ್ರದರ್ಶಿಸಿ 428 ರನ್‌ಗಳನ್ನು ಕಲೆಹಾಕಿತು. ತಂಡದ ಪರ ವೈಭವ್ ಸೂರ್ಯವಂಶಿ ಮತ್ತು ವೇದಾಂತ್ ತ್ರಿವೇದಿ ಶತಕ ಸಿಡಿಸಿ ಮಿಂಚಿದರು. ಇದರಲ್ಲಿ ವೇದಾಂತ್ ತ್ರಿವೇದಿ 192 ಎಸೆತಗಳನ್ನು ಎದುರಿಸಿ 140 ರನ್‌ಗಳ ಇನ್ನಿಂಗ್ಸ್ ಆಡಿದರೆ, ವೈಭವ್ ಸೂರ್ಯವಂಶಿ ತಮ್ಮ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಶತಕ ಬಾರಿಸಿದರು.

ಸಿಕ್ಸರ್‌ಗಳ ವಿಶ್ವದಾಖಲೆ ಉಡೀಸ್

ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ 86 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳ ಸಹಾಯದಿಂದ 113 ರನ್ ಬಾರಿಸಿದರು. ಕೇವಲ 78 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಯೂತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಹಾಗೆಯೇ ಅಂಡರ್-19 ಟೆಸ್ಟ್‌ನಲ್ಲಿ ಸಿಕ್ಸರ್‌ಗಳ ವಿಶ್ವ ದಾಖಲೆಯನ್ನು ಸಹ ಮೀರಿಸಿದರು.

ಯೂತ್ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯನ್ನು ಈ ಹಿಂದೆ ಇಂಗ್ಲೆಂಡ್‌ನ ಜಾರ್ಜ್ ಬಾರ್ಟ್ಲೆಟ್ (13) ಹೊಂದಿದ್ದರು. ಆದಾಗ್ಯೂ, ವೈಭವ್ ಸೂರ್ಯವಂಶಿ ಈಗ 15 ಸಿಕ್ಸರ್‌ಗಳನ್ನು ಬಾರಿಸಿ ಬಾರ್ಟ್ಲೆಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ಯೂತ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಹಿಂದೆ ಈ ದಾಖಲೆ ಇನ್ನಿಂಗ್ಸ್​ವೊಂದರಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದ ಹರ್ವಂಶ್ ಪಂಗಾಲಿಯಾ ಅವರ ಹೆಸರಿನಲ್ಲಿತ್ತು.

IND A vs AUS A: ಆಸೀಸ್ ವಿರುದ್ಧ 412 ರನ್ ಬೆನ್ನಟ್ಟಿ ಗೆದ್ದ ಭಾರತಕ್ಕೆ ಟೆಸ್ಟ್ ಸರಣಿ

ಭಾರತಕ್ಕೆ ಇನ್ನಿಂಗ್ಸ್ ಗೆಲುವು

ಭಾರತದ ಅಂಡರ್-19 ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ 185 ರನ್‌ಗಳ ಮುನ್ನಡೆ ಸಾಧಿಸಿತು. ಇತ್ತ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಅಂಡರ್-19 ತಂಡ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತ ತಂಡವು ಮೊದಲ ಬಹು-ದಿನ ಪಂದ್ಯವನ್ನು ಇನ್ನಿಂಗ್ಸ್ ಮತ್ತು 58 ರನ್‌ಗಳಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 2 October 25