Fact Check: ಪಾಕಿಸ್ತಾನ ಕ್ರಿಕೆಟ್ ತಂಡದಿಂದ ದುಬೈನಲ್ಲಿ ಆಹಾರಕ್ಕಾಗಿ ಜಗಳ?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ
India vs Pakistan Asia Cup 2025 Fact Check: ಈ ವಿಡಿಯೋ ಲಾಹೋರ್ ಬಾರ್ ಚುನಾವಣೆಯದ್ದೋ ಅಥವಾ ಪಾಕಿಸ್ತಾನದ ಯಾವುದೇ ಬಾರ್ ಚುನಾವಣೆಯದ್ದೋ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಸೆಪ್ಟೆಂಬರ್ 2025 ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತಪಡಿಸುತ್ತೇವೆ.

ಬೆಂಗಳೂರು (ಅ. 02): ಕಳೆದ ಭಾನುವಾರ ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಫೈನಲ್‌ನಲ್ಲಿ ಭಾರತ ತಂಡ (Indian Cricket Team) ಪಾಕಿಸ್ತಾನವನ್ನು ಸೋಲಿಸಿತು. ಆದರೆ ಟ್ರೋಫಿ ಹಸ್ತಾಂತರದ ಸುತ್ತಲಿನ ವಿವಾದ ಇನ್ನೂ ಮುಂದುವರೆದಿದೆ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಪಾಕಿಸ್ತಾನಿ ಕ್ರಿಕೆಟಿಗರು ದುಬೈನಲ್ಲಿ ಆಹಾರ ಸೇವಿಸುವಾಗ ಗಲಾಟೆ ಮಾಡುವ ರೂಪದಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಈ ವಿಡಿಯೋದಲ್ಲಿ ಜನರು ಊಟ ಸೇವಿಸಲು ನೂಕು- ನುಗ್ಗಲಿಲ್ಲಿ ಧಾವಿಸುತ್ತಿರುವ ದೃಶ್ಯ ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ದುಬೈನಿಂದ ಹೊರಡುವ ಮೊದಲು ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಅವರ ಸಿಬ್ಬಂದಿ’’ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ:
ಊಟ ಸೇವಿಸಲು ಪಾಕ್ ಆಟಗಾರರಿಂದ ನೂಕು-ನುಗ್ಗಲು?
ಆದಾಗ್ಯೂ, ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪಾಕಿಸ್ತಾನ ಕ್ರಿಕೆಟ್ ತಂಡದದ್ದಲ್ಲ ಎಂದು ಕಂಡುಬಂದಿದೆ. ಅಕ್ಟೋಬರ್ 2020 ರಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಪಾಕಿಸ್ತಾನದಲ್ಲಿ ಬಾರ್ ಅಸೋಸಿಯೇಷನ್ ಚುನಾವಣೆಯ ನಂತರ ನಡೆದ ಔತಣಕೂಟದ ವಿಡಿಯೋ ಇದಾಗಿದೆ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪಾಕಿಸ್ತಾನ ಕ್ರಿಕೆಟ್ ತಂಡದ ಯಾವುದೇ ಆಟಗಾರರು ಕಾಣಿಸುತ್ತಿಲ್ಲ ಎಂದು ತಿಳಿದುಬಂದಿದೆ. ಇದಲ್ಲದೆ, ವಿಡಿಯೋದಲ್ಲಿರುವ ಅನೇಕ ಜನರು ವಕೀಲರು ಧರಿಸುವಂತೆಯೇ ಬಿಳಿ ಶರ್ಟ್, ಕಪ್ಪು ಕೋಟುಗಳು ಮತ್ತು ಟೈಗಳನ್ನು ಧರಿಸಿದ್ದಾರೆ.
Fact Check: ನಾಯಿಯ ಹೆಸರಿನಲ್ಲಿ ವೈರಲ್ ಆಗುತ್ತಿರುವ ಈ ಆಧಾರ್ ಕಾರ್ಡ್‌ನ ನಿಜಾಂಶ ಏನು?: ಇಲ್ಲಿದೆ ಮಾಹಿತಿ
ನಂತರ, ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿ ವಿಡಿಯೋದ ಕೀಫ್ರೇಮ್‌ಗಳನ್ನು ಪರಿಶೀಲಿಸಿದಾಗ, ಅದು ಅಕ್ಟೋಬರ್ 2020 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ ಎಂಬುದು ಸ್ಪಷ್ಟವಾಯಿತು. ಪೋಸ್ಟ್‌ಗಳಲ್ಲಿರುವ ವಿವರಣೆಯೆಂದರೆ ಅದು ಲಾಹೋರ್ ಬಾರ್ ಕೌನ್ಸಿಲ್ ಚುನಾವಣೆಯ ಔತಣಕೂಟದ ದೃಶ್ಯವಾಗಿದೆ.
This Lahore Bar Election gathering is evoking such Nostalgia. Those wedding parties in Bihar. 😅 pic.twitter.com/pu3bhnJvLV
— Gabbar (@GabbbarSingh) October 2, 2020
ಲಾಹೋರ್‌ನ ವಕೀಲ ಉಸ್ಮಾನ್ ರಜಾ ಜಮಿಲ್ ಎಂಬ ಮಾಜಿ ಬಳಕೆದಾರ ಅಕ್ಟೋಬರ್ 1, 2020 ರಂದು ಬಾರ್ ಅಸೋಸಿಯೇಷನ್ ಚುನಾವಣೆಯಿಂದ ಬಂದಿರುವುದಾಗಿ ಹೇಳಿಕೊಂಡು ವೈರಲ್ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
lahore bar election gathering zindabad..lets slap each other to get first dibs on the meat – lets keep our facemasks off whilst we push and shove and lets show the next generation of lawyers what lies ahead for their time.. #barelectionsmatter #andthefoodofcourse pic.twitter.com/kfsfX9AFcp
— Usman Raza jamil (@ujaydaman) October 1, 2020
2020 ರಲ್ಲಿ ಪಾಕಿಸ್ತಾನದಲ್ಲಿ ನಡೆದ ಬಾರ್ ಅಸೋಸಿಯೇಷನ್ ಚುನಾವಣೆಗಳನ್ನು ಸಹ ನಾವು ಪರಿಶೀಲಿಸಿದ್ದೇವೆ. ವೈರಲ್ ವಿಡಿಯೋ ಬಿಡುಗಡೆಯಾದ ದಿನಾಂಕಗಳಂದು ಪಂಜಾಬ್ ಬಾರ್ ಕೌನ್ಸಿಲ್ ಚುನಾವಣೆಗಳು ನಡೆದಿವೆ ಎಂದು ನಾವು ಕಂಡುಕೊಂಡಿದ್ದೇವೆ. ಇದರ ವೇಳಾಪಟ್ಟಿಯನ್ನು ಕೆಳಗೆ ಕಾಣಬಹುದು.
ಈ ವಿಡಿಯೋ ಲಾಹೋರ್ ಬಾರ್ ಚುನಾವಣೆಯದ್ದೋ ಅಥವಾ ಪಾಕಿಸ್ತಾನದ ಯಾವುದೇ ಬಾರ್ ಚುನಾವಣೆಯದ್ದೋ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಸೆಪ್ಟೆಂಬರ್ 2025 ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. ಲಭ್ಯವಿರುವ ಮಾಹಿತಿಯಿಂದ, ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಆಹಾರಕ್ಕಾಗಿ ಗಲಾಟೆ ಮಾಡುತ್ತಿರುವುದನ್ನು ತೋರಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ನಖ್ವಿ
ಏಷ್ಯಾಕಪ್ 2025ರ ವಿವಾದದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಖ್ವಿ, ನಾನು ಯಾವುದೇ ತಪ್ಪು ಮಾಡಿಲ್ಲ. ಈಗಲೂ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಲು ಸಿದ್ಧನಿದ್ದೇನೆ. ಆದರೆ ಟೀಮ್ ಇಂಡಿಯಾ ನಾಯಕ ಬಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಗೆ ಬಂದು ಟ್ರೋಫಿ ಸ್ವೀಕರಿಸಲಿ ಎಂದು ಮತ್ತೆ ಒತ್ತಿ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಪಾಕಿಸ್ತಾನದ ಆಂತರಿಕ ಸಚಿವಾಲಯದ ಮುಖ್ಯಸ್ಥರೂ ಆಗಿರುವ ನಖ್ವಿ, ಇತ್ತೀಚೆಗೆ ನಡೆದ ಎಸಿಸಿ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಾಧ್ಯಮ ವರದಿಗಳನ್ನು ಸಹ ನಿರಾಕರಿಸಿರುವ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




