IND vs WI: ಸಿರಾಜ್, ಬುಮ್ರಾ ಬೆಂಕಿ ಬೌಲಿಂಗ್: 265 ಎಸೆತಗಳಲ್ಲಿ ವಿಂಡೀಸ್ ಆಲೌಟ್
India vs West Indies, 1st Test: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಭರ್ಜರಿ ಬೌಲಿಂಗ್ ಪ್ರದರ್ಶನದೊಂದಿಗೆ ಕೇವಲ 265 ಎಸೆತಗಳಲ್ಲಿ ವಿಂಡೀಸ್ ಪಡೆಯನ್ನು ಆಲೌಟ್ ಮಾಡಿದೆ.

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವು ಅಲ್ಪ ಮೊತ್ತಕ್ಕೆ ಕುಸಿದಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
ಆರಂಭಿಕ ಆಟಗಾರ ತೇಜ್ನರೈನ್ ಚಂದ್ರಪಾಲ್ (0) ರನ್ನು ಶೂನ್ಯಕ್ಕೆ ಔಟ್ ಮಾಡಿ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜಾನ್ ಕ್ಯಾಂಪ್ಬೆಲ್ (8) ವಿಕೆಟ್ ಕಬಳಿಸುವಲ್ಲಿ ಬುಮ್ರಾ ಯಶಸ್ವಿಯಾದರು.
ಆ ಬಳಿಕ ಬಂದ ಬ್ರಾಂಡನ್ ಕಿಂಗ್ (13) ಹಾಗೂ ಅಲಿಕ್ ಅಥನಾಝ್ಗೆ (12) ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಶೈ ಹೋಪ್ (26) ವಿಕೆಟ್ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು.
ಈ ಹಂತದಲ್ಲಿ ಜಸ್ಟಿನ್ ಗ್ರೀವ್ಸ್ 32 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇದಾಗ್ಯೂ ವೆಸ್ಟ್ ಇಂಡೀಸ್ ಪಡೆಯನ್ನು 44.1 ಓವರ್‌ಗಳಲ್ಲಿ 162 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.
ಟೀಮ್ ಇಂಡಿಯಾ ಪರ 14 ಓವರ್‌ಗಳಲ್ಲಿ 40 ರನ್ ನೀಡಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದರೆ, ಜಸ್ ಪ್ರೀತ್ ಬುಮ್ರಾ 14 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದರು.
ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ತೇಜ್ನರೈನ್ ಚಂದ್ರಪಾಲ್, ಜಾನ್ ಕ್ಯಾಂಪ್ಬೆಲ್, ಅಲಿಕ್ ಅಥನಾಝ್, ಬ್ರಾಂಡನ್ ಕಿಂಗ್, ಶೈ ಹೋಪ್ (ವಿಕೆಟ್ ಕೀಪರ್), ರೋಸ್ಟನ್ ಚೇಸ್ (ನಾಯಕ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೇನ್, ಜೇಡನ್ ಸೀಲ್ಸ್.
