AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್​ಗೆ ಅಫ್ಘಾನಿಸ್ತಾನ್ ಪ್ರಾಥಮಿಕ ತಂಡ ಪ್ರಕಟ

Asia Cup 2025: ಏಷ್ಯಾಕಪ್​ 2025 ರಲ್ಲಿ ಅಫ್ಘಾನಿಸ್ತಾನ್ ತಂಡವನ್ನು ರಶೀದ್ ಖಾನ್ ಮುನ್ನಡೆಸಲಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್​ನಲ್ಲಿ ಅಫ್ಘಾನ್ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರಶೀದ್ ಈ ಬಾರಿ ಕೂಡ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಇದಕ್ಕಾಗಿ 22 ಸದಸ್ಯರ ತಂಡವೊಂದನ್ನು ರಚಿಸಿದ್ದು, ಈ ಮೂಲಕ ಏಷ್ಯಾಕಪ್​ಗಾಗಿ ಸಿದ್ಧತೆಗಳನ್ನು ಆರಂಭಿಸಲಿದೆ.

ಏಷ್ಯಾಕಪ್​ಗೆ ಅಫ್ಘಾನಿಸ್ತಾನ್ ಪ್ರಾಥಮಿಕ ತಂಡ ಪ್ರಕಟ
Afghanistan
ಝಾಹಿರ್ ಯೂಸುಫ್
|

Updated on: Aug 07, 2025 | 10:56 AM

Share

ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ 2025 ರ ಏಷ್ಯಾಕಪ್ ಟೂರ್ನಿಗೆ ಅಫ್ಘಾನಿಸ್ತಾನ್ 22 ಸದಸ್ಯರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. ಈ ತಂಡವು ಪಾಕಿಸ್ತಾನ್ ಹಾಗೂ ಯುಎಇ ಒಳಗೊಂಡ ತ್ರಿಕೋನ ಸರಣಿ ಆಡಲಿದ್ದು, ಈ ಸರಣಿಯ ಬಳಿಕ 22 ಆಟಗಾರರಿಂದ ಏಷ್ಯಾಕಪ್​ಗೆ 15 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಇನ್ನು ಈ 22 ಸದಸ್ಯರ ತಂಡದಲ್ಲಿ  ಭರವಸೆಯ ಯುವ ಸ್ಪಿನ್ನರ್ ಅಲ್ಲಾ ಗಝನ್‌ಫರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಫ್ಘಾನ್ ತಂಡದಲ್ಲಿ ಕಾಣಿಸಿಕೊಂಡಿದ್ದ ಗಝನ್​ಫರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್​​ನೆಸ್​ನೊಂದಿಗೆ ಯುವ ಸ್ಪಿನ್ನರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. 

2025 ರ ಟಿ20 ಬ್ಲಾಸ್ಟ್‌ನಲ್ಲಿ ಡರ್ಬಿಶೈರ್‌ ಪರ ಕಣಕ್ಕಿಳಿದಿದ್ದ ಗಝನ್​ಫರ್ 16 ವಿಕೆಟ್ ಉರುಳಿಸಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.  ಅಲ್ಲದೆ ಇದೇ ವೇಳೆ ಕೇವಲ 7.05 ರ ಎಕಾನಮಿ ರೇಟ್​ನಲ್ಲಿ ಮಾತ್ರ ರನ್ ನೀಡಿದ್ದರು. ಹೀಗಾಗಿಯೇ ಮುಂಬರುವ ಟಿ20 ಸರಣಿಗೆ ಅಲ್ಲಾ ಗಝನ್​ಫರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ಇತ್ತ ಅಲ್ಲಾ ಗಝನ್​ಫರ್  ಅವರ ಮರಳುವಿಕೆಯು ಅಫ್ಘಾನಿಸ್ತಾನದ ಸ್ಪಿನ್ ಅಸ್ತ್ರವನ್ನು ಮತ್ತಷ್ಟು ಬಲಪಡಿಸಿದೆ. ಏಕೆಂದರೆ ಈಗಾಗಲೇ ತಂಡದಲ್ಲಿ ಅನುಭವಿ ಸ್ಪಿನ್ನರ್​ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಇದ್ದು, ಇವರೊಂದಿಗೆ ಯುವ ಸ್ಪಿನ್ನರ್​ಗಳಾಗಿ ಅಲ್ಲಾ ಗಝನ್​ಫರ್ ಹಾಗೂ ನೂರ್ ಅಹ್ಮದ್ ಸೇರಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್​ನಲ್ಲಿ ಅಫ್ಘಾನ್ ಕಡೆಯಿಂದ ಸ್ಪಿನ್ ಅಸ್ತ್ರಗಳ ಪ್ರಯೋಗವನ್ನು ನಿರೀಕ್ಷಿಸಬಹುದು.

ತ್ರಿಕೋನ ಸರಣಿ:

ಏಷ್ಯಾಕಪ್​ಗೂ ಮೊದಲು ಅಫ್ಘಾನಿಸ್ತಾನ್ ತ್ರಿಕೋನ ಸರಣಿ ಆಡಲಿದೆ. ಆಗಸ್ಟ್ 29 ರಿಂದ ಶಾರ್ಜಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಅಫ್ಘಾನಿಸ್ತಾನ್, ಪಾಕಿಸ್ತಾನ್ ಹಾಗೂ ಯುಎಇ ತಂಡಗಳು ಕಣಕ್ಕಿಳಿಯಲಿವೆ. ಈ ಸರಣಿಯ ಬಳಿಕ ಅಫ್ಘಾನ್ ಪಡೆ ಏಷ್ಯಾಕಪ್​ ಆಡಲಿದೆ.

ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ್ ತಂಡವು ಗ್ರೂಪ್ ಬಿ ನಲ್ಲಿ ಕಾಣಿಸಿಕೊಂಡಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಹಾಂಗ್ ಕಾಂಗ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ 2 ಜಯ ಸಾಧಿಸಿದರೆ ಅಫ್ಘಾನಿಸ್ತಾನ್ ತಂಡವು ಸೂಪರ್ 4 ಹಂತಕ್ಕೇರಬಹುದು.

ಇದನ್ನೂ ಓದಿ: KL Rahul: ಭಾರತ ತಂಡದಿಂದ ಕೆಎಲ್ ರಾಹುಲ್ ಔಟ್

ಅತ್ತ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ತಂಡಗಳಿವೆ. ಈ ಗ್ರೂಪ್​ನಿಂದ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ, ದ್ವಿತೀಯ ಸುತ್ತಿನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ಮುಖಾಮುಖಿಯಾಗಲಿದೆ.

ಏಷ್ಯಾ ಕಪ್ ಮತ್ತು ತ್ರಿಕೋನ ಸರಣಿಗೆ ಅಫ್ಘಾನಿಸ್ತಾನ್ ಪ್ರಾಥಮಿಕ ತಂಡ:

ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಖುಲ್ಲಾ ಅಟಲ್, ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ನಂಗ್ಯಾಲ್ ಖರೋಟಿ, ಶರಫುದ್ದೀನ್ ಅಶ್ರಫ್, ಕರೀಮ್ ಜನ್ನತ್, ಅಝ್ಮತ್ ಒಮರ್​ಝಾಹಿ, ಗುಲ್ಬದ್ದೀನ್ ನೈಬ್,  ಮುಜೀಬ್ ಝದ್ರಾನ್, ಅಲ್ಲಾ ಗಝನ್​ಫರ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ನವೀನ್ ಉಲ್ ಹಕ್, ಫರೀದ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದ್​ಝಾಹಿ, ಬಶೀರ್ ಅಹ್ಮದ್.