ಓ 36 ರನ್ಗೆ ಆಲೌಟ್ ಆದವರು… ಟೀಮ್ ಇಂಡಿಯಾವನ್ನು ಹೀಯಾಳಿಸಿದ ಆಸ್ಟ್ರೇಲಿಯಾ ಆಟಗಾರ
India vs Australia 2nd Test: ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಶುರುವಾಗಲಿದೆ. ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ. ಹಾಗಾಗಿಯೇ ಈ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ದಿನಗಣನೆ ಶುರುವಾಗಿದೆ. ಡಿಸೆಂಬರ್ 6 ರಂದು ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಹೊನಲು ಬೆಳಕಿನ ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಅಭ್ಯಾಸ ನಡುವೆ ಆಸ್ಟ್ರೇಲಿಯಾ ತಂಡ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು.
ಈ ವೇಳೆ ಮಾತನಾಡಿದ ಅಲೆಕ್ಸ್ ಕ್ಯಾರಿ, ಟೀಮ್ ಇಂಡಿಯಾ 36 ರನ್ಗಳಿಗೆ ಆಲೌಟ್ ಆಗಿರುವುದನ್ನು ನೆನಪಿಸಿದ್ದಾರೆ. 2020 ರಲ್ಲಿ ಆಡಿಲೇಡ್ನಲ್ಲಿ ಆಡಲಾದ ಪಂದ್ಯದಲ್ಲಿ ಭಾರತ ತಂಡವು ಕೇವಲ 36 ರನ್ಗಳಿಗೆ ಆಲೌಟ್ ಆಗಿತ್ತು. ಅದು ನನಗೆ ಇನ್ನೂ ನೆನಪಿದೆ ಎಂದು ಕ್ಯಾರಿ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಟೀಮ್ ಇಂಡಿಯಾ 36 ರನ್ಗೆ ಆಲೌಟ್ ಆಗಿರುವುದು ಐತಿಹಾಸಿಕ ಘಟನೆ. ಅದು ಮತ್ತೊಮ್ಮೆ ಪುನರಾವರ್ತನೆಯಾಗುವುದಿಲ್ಲ. ಇದಾಗ್ಯೂ ಈ ಬಾರಿ ಕೂಡ ನಾವೇ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತೇವೆ ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.
ಏಕೆಂದರೆ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಆಡಿದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ಇದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ನಾವು ಸರಣಿಯಲ್ಲಿ ಕಂಬ್ಯಾಕ್ ಮಾಡಲಿದ್ದೇವೆ ಎಂದು ಅಲೆಕ್ಸ್ ಕ್ಯಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
36 ರನ್ಗೆ ಆಲೌಟ್:
2020-21ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿತ್ತು. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 244 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವನ್ನು 191 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು.
53 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೇವಲ 36 ರನ್ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡದ ಅತ್ಯಂತ ಕಡಿಮೆ ಮೊತ್ತ. ಅಲ್ಲದೆ ಟೆಸ್ಟ್ನಲ್ಲಿ ಅತೀ ಕಡಿಮೆ ಸ್ಕೋರ್ಗಳಿಸಿದ ವಿಶ್ವದ 4ನೇ ತಂಡ ಎಂಬ ಅಪಖ್ಯಾತಿಗೂ ಟೀಮ್ ಇಂಡಿಯಾ ಒಳಗಾಗಿತ್ತು.
ಇದನ್ನೂ ಓದಿ: 15.5 ಓವರ್ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ
ಈ ಹೀನಾಯ ಸೋಲನ್ನು ಪ್ರಸ್ತಾಪಿಸಿ ಇದೀಗ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅಡಿಲೇಡ್ ಟೆಸ್ಟ್ನಲ್ಲಿ ಈ ಬಾರಿ ಕೂಡ ಆಸೀಸ್ ಪಡೆ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.