AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೆಟ್ ಕೀಪರ್ ಸೇರಿ ತಂಡದ 11 ಆಟಗಾರರಿಂದ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿ

Syed Mushtaq Ali Trophy: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ತಂಡವು ಅಭೂತಪೂರ್ವ ಸಾಧನೆ ಮಾಡಿದೆ. ಮಣಿಪುರ ವಿರುದ್ಧದ ಪಂದ್ಯದಲ್ಲಿ, ದೆಹಲಿ ತಂಡದ ಎಲ್ಲಾ 11 ಆಟಗಾರರು ಬೌಲಿಂಗ್ ಮಾಡಿದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ತಂಡದ ವಿಕೆಟ್ ಕೀಪರ್ ಸಹ ಬೌಲಿಂಗ್ ಮಾಡಿದ್ದು ವಿಶೇಷ.

ವಿಕೆಟ್ ಕೀಪರ್ ಸೇರಿ ತಂಡದ 11 ಆಟಗಾರರಿಂದ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿ
ದೆಹಲಿ ತಂಡ
ಪೃಥ್ವಿಶಂಕರ
|

Updated on:Nov 29, 2024 | 8:22 PM

Share

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ತಂಡ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ ಯಾವ ತಂಡವೂ ಮಾಡಲಾಗದ ಸಾಧನೆಯನ್ನು ಮಾಡಿದೆ. ಇಂದು ನಡೆದ ಮಣಿಪುರ ವಿರುದ್ಧದ ಈ ಪಂದ್ಯದಲ್ಲಿ ದೆಹಲಿ ತಂಡ ಎಲ್ಲಾ 11 ಆಟಗಾರರು ಬೌಲಿಂಗ್ ಮಾಡುವ ಮೂಲಕ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ದೆಹಲಿ ತಂಡದ ವಿಕೆಟ್ ಕೀಪರ್​ ಕೂಡ ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ದೆಹಲಿ ತಂಡ ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ ಟಿ20ಯ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ 9 ಬೌಲರ್‌ಗಳು ಬೌಲ್ ಮಾಡಿದ್ದು ಇದುವರೆಗಿನ ಸಾಧನೆಯಾಗಿತ್ತು.

ಎಲ್ಲಾ 11 ಆಟಗಾರರು ಬೌಲರ್​ಗಳಾದರು

ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪುರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಕಂಗ್ಬಾಮ್ ಪ್ರಿಯೋಜಿತ್ ಸಿಂಗ್ ಶೂನ್ಯಕ್ಕೆ ಔಟಾದರು. ಇದಾದ ಬಳಿಕ ದೆಹಲಿ ನಾಯಕ ಆಯುಷ್ ಬಧೋನಿ ರಣತಂತ್ರ ರೂಪಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತು. ಅವರು ತಮ್ಮ ತಂಡದ ಎಲ್ಲಾ ಆಟಗಾರರಿಂದ ಬೌಲಿಂಗ್ ಮಾಡಿಸಿದರು. ಆಯುಷ್ ಸಿಂಗ್ ಅವರಲ್ಲದೆ, ಅಖಿಲ್ ಚೌಧರಿ, ಹರ್ಷ್ ತ್ಯಾಗಿ, ದಿಗ್ವೇಶ್ ರಾಠಿ, ಮಯಾಂಕ್ ರಾವತ್ ಕೂಡ ಬೌಲಿಂಗ್ ಮಾಡಿದರು. ಇದಾದ ಬಳಿಕ ಆಯುಷ್ ಬಧೋನಿ ವಿಕೆಟ್ ಕೀಪಿಂಗ್ ಬಿಟ್ಟು ತಾವೇ ಬೌಲಿಂಗ್ ಮಾಡಲು ಮುಂದಾದರು. ಇವರಲ್ಲದೆ ಆರ್ಯನ್ ರಾಣಾ, ಹಿಮ್ಮತ್ ಸಿಂಗ್, ಪ್ರಿಯಾಂಶ್ ಆರ್ಯ, ಯಶ್ ಧುಲ್ ಮತ್ತು ಅನುಜ್ ರಾವತ್ ಕೂಡ ಬೌಲಿಂಗ್ ಮಾಡಿದರು.

ಮಣಿಪುರ 120ಕ್ಕೆ ಆಲೌಟ್

ದೆಹಲಿ ತಂಡದ ಎಲ್ಲಾ 11 ಬೌಲರ್​ಗಳನ್ನು ಎದುರಿಸಿದ ಮಣಿಪುರ ತಂಡ ಕೇವಲ 120 ರನ್ ಗಳಿಸಲಷ್ಟೇ ಶಕ್ತವಾಯಿತು. ದೆಹಲಿ ಪರ ದಿಗ್ವೇಶ್ ರಾಠಿ 8 ರನ್ ನೀಡಿ 2 ವಿಕೆಟ್ ಕಬಳಿಸಿದರು. ವಿಕೆಟ್ ಕೀಪರ್ ಹರ್ಷ್ ತ್ಯಾಗಿ 2 ವಿಕೆಟ್ ಪಡೆದರೆ, ನಾಯಕ ಆಯುಷ್ ಬಧೋನಿ ಕೂಡ ಒಂದು ವಿಕೆಟ್ ಪಡೆದರು. ಒಂದು ಹಂತದಲ್ಲಿ ಮಣಿಪುರ 41 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯಲ್ಲಿ ರೆಕ್ಸ್ ಸಿಂಗ್ 23 ರನ್ ಮತ್ತು ಅಹ್ಮದ್ ಶಾ 32 ರನ್ ಗಳಿಸಿ ತಂಡವನ್ನು 120 ರನ್​ಗಳಿಗೆ ಕೊಂಡೊಯ್ದರು.

ದೆಹಲಿಗೆ ಜಯ

ಮಣಿಪುರ ನೀಡಿದ 120 ರನ್​ಗಳ ಗುರಿ ಬೆನ್ನಟ್ಟಿದ ದೆಹಲಿ ತಂಡ ಇನ್ನು 9 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಡೆಲ್ಲಿ ಪರ ಯಶ್ ಧುಲ್ ಅಜೇಯ 59 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Fri, 29 November 24