ಹೊಸ ಇತಿಹಾಸ… ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿದ ಅಮಿತ್..!
Amit Shukla: ರಣಜಿ ಟೂರ್ನಿಯಲ್ಲಿ 22 ವರ್ಷದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಹೊಸ ಇತಿಹಾಸವನ್ನು ರಚಿಸಿದ್ದಾರೆ. ಅದು ಸಹ 4 ಓವರ್ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ. ಆದರೆ ಈ ನಾಲ್ಕು ಓವರ್ಗಳು ಕೂಡ ಮೇಡನ್ ಆಗಿತ್ತು ಎಂಬುದು ವಿಶೇಷ. ಅಂದರೆ ಯಾವುದೇ ರನ್ ನೀಡದೇ ಅಮಿತ್ ಶುಕ್ಲಾ 5 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಅಮಿತ್ ಶುಕ್ಲಾ ಹೊಸ ಇತಿಹಾಸ ರಚಿಸಿದ್ದಾರೆ. ಅದು ಸಹ ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸುವ ಮೂಲಕ. ರೋಹ್ಟಕ್ನಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಸರ್ವೀಸಸ್ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವೀಸಸ್ ತಂಡವು ಕೇವಲ 211 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಹರ್ಯಾಣ ತಂಡಕ್ಕೆ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಆಘಾತದ ಮೇಲೆ ಆಘಾತ ನೀಡಿದರು. 2ನೇ ಓವರ್ನಲ್ಲಿ ದಾಳಿಗಿಳಿದ ಅಮಿತ್ ತನ್ನ ದ್ವಿತೀಯ ಎಸೆತದಲ್ಲೇ ಮೊದಲ ವಿಕೆಟ್ ಪಡೆದರು. ಈ ಓವರ್ನಲ್ಲಿ ಅವರು ಯಾವುದೇ ರನ್ ನೀಡಿರಲಿಲ್ಲ.
ಇದಾದ ಬಳಿಕ ನಾಲ್ಕನೇ ಓವರ್ನ ಮೊದಲ ಎಸೆತದಲ್ಲೇ 2ನೇ ವಿಕೆಟ್ ಕಬಳಿಸಿದರು. ಈ ಓವರ್ನಲ್ಲೂ ಯಾವುದೇ ರನ್ ಬಿಟ್ಟು ಕೊಟ್ಟಿರಲಿಲ್ಲ. ಆನಂತರ 6ನೇ ಓವರ್ನ 5ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಈ ಓವರ್ ಕೂಡ ಮೇಡನ್ ಆಗಿತ್ತು,
ಇನ್ನು 8ನೇ ಓವರ್ನ ಮೊದಲ ಎಸೆತದಲ್ಲಿ ಧೀರು ಸಿಂಗ್ ವಿಕೆಟ್ ಪಡೆದ ಅಮಿತ್ ಶುಕ್ಲಾ, ಮೂರನೇ ಎಸೆತದಲ್ಲಿ ನಿಖಿಲ್ ಕಶ್ಯಪ್ ವಿಕೆಟ್ ಕಬಳಿಸಿದರು. ಈ ಮೂಲಕ ಒಂದೇ ಒಂದು ರನ್ ನೀಡದೇ ಐದು ವಿಕೆಟ್ಗಳ ಸಾಧನೆ ಮಾಡಿದರು.
8 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ:
ಯಾವುದೇ ರನ್ ನೀಡದೇ ಮೊದಲ 5 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ ಆ ಬಳಿಕ ಕೂಡ ತನ್ನ ಸ್ಪಿನ್ ಮೋಡಿ ತೋರಿಸಿದರು. ಈ ಮೂಲಕ 20 ಓವರ್ಗಳನ್ನು ಎಸೆದ ಅವರು 8 ಮೇಡನ್ ಜೊತೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು.
ಅಮಿತ್ ಶುಕ್ಲಾ ಅವರ ಈ ಭರ್ಜರಿ ಬೌಲಿಂಗ್ನಿಂದಾಗಿ ಹರ್ಯಾಣ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 111 ರನ್ಗಳಿಸಿ ಆಲೌಟ್ ಆಗಿದೆ.
ಇದೀಗ ಸರ್ವೀಸಸ್ ತಂಡವು ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, 67 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿದೆ.
ಹರ್ಯಾಣ ಪ್ಲೇಯಿಂಗ್ 11: ಅಂಕಿತ್ ಕುಮಾರ್ (ನಾಯಕ) , ಯುವರಾಜ್ ಯೋಗೇಂದರ್ ಸಿಂಗ್ , ಮಾಯಾಂಕ್ ಶಾಂಡಿಲ್ಯ , ಯಶವರ್ಧನ್ ದಲಾಲ್ (ವಿಕೆಟ್ ಕೀಪರ್ ) ಧೀರು ಸಿಂಗ್ , ಪಾರ್ಥ್ ವ್ಯಾಟ್ಸ್ , ಕಪಿಲ್ ಹೂಡಾ , ಅನುಜ್ ಥಕ್ರಾಲ್ , ರಾಹುಲ್ ರಾಥೀ , ಅನ್ಶುಲ್ ಕಂಬೋಜ್ , ನಿಖಿಲ್ ಕಶ್ಯಪ್.
ಇದನ್ನೂ ಓದಿ: ಟೆಸ್ಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ
ಸರ್ವೀಸಸ್ ಪ್ಲೇಯಿಂಗ್ 11: ರಜತ್ ಪಲಿವಾಲ್ (ನಾಯಕ) , ಶಿವಂ ಕುಮಾರ್ ,ಶುಭಂ ರೋಹಿಲ್ಲಾ , ಮೋಹಿತ್ ಅಹ್ಲಾವತ್ (ವಿಕೆಟ್ ಕೀಪರ್ ), ರವಿ ಚೌಹಾಣ್ , ನಕುಲ್ ಶರ್ಮಾ , ಮೋಹಿತ್ ಜಾಂಗ್ರಾ , ಪುಲ್ಕಿತ್ ನಾರಂಗ್ , ಅಮಿತ್ ಶುಕ್ಲಾ , ಜಯಂತ್ ಗೋಯತ್ , ವಿನೀತ್ ಧಂಖರ್.
