WPL 2026: 2 ನಗರಗಳಲ್ಲಿ ನಡೆಯಲಿದೆ ವುಮೆನ್ಸ್ ಪ್ರೀಮಿಯರ್ ಲೀಗ್
Women's Premier League 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ದ್ವಿತೀಯ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದರು.
Updated on:Nov 18, 2025 | 10:05 AM

ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಸೀಸನ್ ಅನ್ನು ಎರಡು ನಗರಗಳಲ್ಲಿ ಆಯೋಜಿಸಲು ಚಿಂತಿಸಲಾಗಿದೆ. ಅದರಂತೆ WPL 2026 ಮುಂಬೈ ಮತ್ತು ಬರೋಡಾದಲ್ಲಿ ನಡೆಯುವ ಸಾಧ್ಯತೆಯಿದೆ. ಮುಂಬರುವ ಟಿ20 ವಿಶ್ವಕಪ್ಗೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ.

ಏಕೆಂದರೆ 2026ರ ಟಿ20 ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯವಹಿಸಲಿದೆ. ಈ ಟೂರ್ನಿಯು ಫೆಬ್ರವರಿ 7 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿ ಪ್ಲ್ಯಾನ್ ರೂಪಿಸುತ್ತಿದೆ.

ಅದರಂತೆ ವುಮೆನ್ಸ್ ಪ್ರೀಮಿಯರ್ ಲೀಗ್ 2026 ಜನವರಿ 7 ರಿಂದ ಶುರುವಾಗಲಿದ್ದು, ಫೆಬ್ರವರಿ 3 ರಂದು ಕೊನೆಗೊಳ್ಳಲಿದೆ ಎಂದು ತಿಳಿದು ಬಂದಿದೆ. ಅಂದರೆ ಫೆಬ್ರವರಿಯ ಮೊದಲ ವಾರದಲ್ಲೇ WPL ಟೂರ್ನಿಗೆ ತೆರೆ ಎಳೆಯಲು ಬಿಸಿಸಿಐ ನಿರ್ಧರಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ.

ಇನ್ನು ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ಗಾಗಿ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಪಟ್ಟಿಯನ್ನು ಸಲ್ಲಿಸಿದ್ದು, ಇನ್ನುಳಿದ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಸಲಿದೆ. ಈ ಹರಾಜು ಪ್ರಕ್ರಿಯೆಯು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಕೇವಲ 73 ಆಟಗಾರ್ತಿಯರಿಗೆ ಮಾತ್ರ ಅವಕಾಶ ದೊರೆಯಲಿದೆ. ಏಕೆಂದರೆ ಎಲ್ಲಾ ಫ್ರಾಂಚೈಸಿಗಳು ತಮ್ಮ ಸ್ಟಾರ್ ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಇದೀಗ 73 ಸ್ಲಾಟ್ಗಳು ಮಾತ್ರ ಖಾಲಿಯಿದೆ. ಈ ಸ್ಥಾನಗಳಿಗಾಗಿ ನವೆಂಬರ್ 27 ರಂದು ಹರಾಜು ನಡೆಯಲಿದೆ.
Published On - 10:04 am, Tue, 18 November 25
