ಕೇವಲ 21 ವರ್ಷ ವಯಸ್ಸಿನಲ್ಲೇ ಭಾರತದ ಉದಯೋನ್ಮುಖ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಹಳೆಯ ಕ್ರೀಡಾಂಗಣಗಳಲ್ಲಿ ಒಂದಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ತಮ್ಮ ವೃತ್ತಿಜೀವನದ ನಾಲ್ಕನೇ ಟೆಸ್ಟ್‌ನಲ್ಲಿ ನಿತೀಶ್ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ನಿತೀಶ್ ಅವರ ಈ ಶತಕದ ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ ಫಾಲೋ ಆನ್ ಜೊತೆಗೆ ಸೋಲಿನ ಭೀತಿಯಿಂದಲೂ ಪಾರಾಗಿದೆ. ಹೀಗಾಗಿ ನಿತೀಶ್ ಅವರ ಶತಕಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಆಂಧ್ರ ಕ್ರಿಕೆಟ್ ಸಂಸ್ಥೆ ನಿತೀಶ್ಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ಗೆ ಬಂದ ನಿತೀಶ್, ವಾಷಿಂಗ್ಟನ್ ಸುಂದರ್ ಜೊತೆ ಅತ್ಯುತ್ತಮ ಜೊತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದಾದ ಬಳಿಕ ಈ ಐತಿಹಾಸಿಕ ನೆಲದಲ್ಲಿ ಶತಕ ಪೂರೈಸುವ ಮೂಲಕ ಬಾಲ್ಯದ ಕನಸನ್ನು ನನಸು ಮಾಡಿಕೊಂಡರು.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬಂದಿರುವ ನಿತೀಶ್ ಅವರ ಈ ಸಾಧನೆ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಹೆಮ್ಮೆಯ ವಿಶೇಷಯವಾಗಿದ್ದು, ಈ ಯುವ ಆಲ್‌ರೌಂಡರ್‌ನ ಸ್ಮರಣೀಯ ಶತಕಕ್ಕೆ ಭರ್ಜರಿ ಬಹುಮಾನ ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಸಂಸದ ಕೆಸಿನೇನಿ ಶಿವನಾಥ್ ತಮ್ಮ ಎಕ್ಸ್ ಖಾತೆಯಲ್ಲಿ ನಿತೀಶ್ ಅವರನ್ನು ಅಭಿನಂದಿಸಿದ್ದು, ಈ ಸಾಧನೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಅವರಿಗೆ ಸಂಘದಿಂದ 25 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಈ ಸಾಧನೆಯು ಲಕ್ಷಾಂತರ ಯುವಕರನ್ನು ಮುನ್ನಡೆಯಲು ಮತ್ತು ಎತ್ತರವನ್ನು ಮುಟ್ಟಲು ಸ್ಫೂರ್ತಿ ನೀಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
Heartiest congratulations to #NitishKumarReddy on his remarkable century against Australia in today’s Test match! 🏏🔥 His grit and determination have made the state of Andhra Pradesh and the nation proud.
To honor this extraordinary feat, the Andhra Cricket Association is… pic.twitter.com/QSh5H5thDc
— Kesineni Sivanath (@KesineniS) December 28, 2024
ಈ ಆಸ್ಟ್ರೇಲಿಯಾ ಪ್ರವಾಸದಲ್ಲಿಯೇ ನಿತೀಶ್ ಟೆಸ್ಟ್ ಪಾದಾರ್ಪಣೆ ಮಾಡಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿತೀಶ್ ಮೊದಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ 41 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲೂ ಅವರ ಬ್ಯಾಟ್ನಿಂದ 38 ರನ್‌ಗಳ ಅಜೇಯ ಇನ್ನಿಂಗ್ಸ್ ಮೂಡಿಬಂತು. ನಂತರ ಅಡಿಲೇಡ್ ಟೆಸ್ಟ್‌ನಲ್ಲೂ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 42 ರನ್ ಕಲೆಹಾಕಿದರು. ಇನ್ನು ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿರುವ ನಿತೀಶ್ ಮೂರನೇ ದಿನದಾಟದ ಅಂತ್ಯದವರೆಗೆ ಅಜೇಯರಾಗಿ ಉಳಿದಿದ್ದು 105 ರನ್ ಕಲೆಹಾಕಿದ್ದಾರೆ. ಇಲ್ಲಿಯವರೆಗೆ, ನಿತೀಶ್ ಈ ಸರಣಿಯ 6 ಇನ್ನಿಂಗ್ಸ್‌ಗಳಲ್ಲಿ 284 ರನ್ ಕಲೆಹಾಕಿದ್ದು, ಸರಣಿಯಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ 3ನೇ ಆಟಗಾರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ