
ಮುಂಬೈ ಟಿ20 ಲೀಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಕ್ಸ್ ಅಂಧೇರಿ ಹಾಗೂ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಕ್ಸ್ ಅಂಧೇರಿ ತಂಡಕ್ಕೆ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅತ್ಯುತ್ತಮ ಆರಂಭ ಒದಗಿಸಿದ್ದರು.
ಪಂದ್ಯದ ಮೊದಲ ಓವರ್‌ನಲ್ಲೇ ಎರಡು ಪ್ರಮುಖ ವಿಕೆಟ್ ಕಿತ್ತ ಅರ್ಜುನ್ ಬಾಂದ್ರಾ ಬ್ಲಾಸ್ಟರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಆಘಾತದಿಂದ ಪಾರಾಗಲು ಬ್ಲಾಸ್ಟರ್ಸ್ ಪಡೆ ಪರದಾಡಬೇಕಾಯಿತು. ಪರಿಣಾಮ 20 ಓವರ್ಗಳಲ್ಲಿ ಕೇವಲ 144 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಈ ಪಂದ್ಯದಲ್ಲಿ 3 ಓವರ್ಗಳನ್ನು ಎಸೆದ ಅರ್ಜುನ್ ತೆಂಡೂಲ್ಕರ್ ಒಂದು ಓವರ್ ಮೇಡನ್ ಮಾಡಿದ್ದರು. ಅಲ್ಲದೆ ಮೂರು ಓವರ್ಗಳಲ್ಲಿ ನೀಡಿದ್ದು ಕೇವಲ 11 ರನ್ಗಳು ಮಾತ್ರ. ಹಾಗೆಯೇ ಈ 3 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು.
145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಅಂಧೇರಿ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲೂ ಆಸರೆಯಾದರು. ಈ ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಲ್ಲದೆ ಯುವ ದಾಂಡಿಗ ಮುಶೀರ್ ಖಾನ್ (54*) ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 116 ರನ್‌ಗಳ ಅಜೇಯ ಜೊತೆಯಾಟವಾಡಿದರು. ಈ ಮೂಲಕ ಕೇವಲ 13.5 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿ ಆರ್ಕ್ಸ್ ಅಂಧೇರಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
ಇದನ್ನೂ ಓದಿ: ಬರೋಬ್ಬರಿ 3,542 ಕೋಟಿ ರೂ! ಕಿಂಗ್ ಖಾನ್ನ ಹಿಂದಿಕ್ಕಿದ ಕಿಂಗ್ ಕೊಹ್ಲಿ
ಐಪಿಎಲ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಅದು ಕೂಡ ಎಲ್ಎಸ್ಜಿ ತಂಡದ ಕೊನೆಯ ಮ್ಯಾಚ್ನಲ್ಲಿ. ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಅರ್ಜುನ್ 4 ಓವರ್ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.
Published On - 8:54 am, Tue, 9 June 26