Team India: ಟೀಮ್ ಇಂಡಿಯಾದಲ್ಲಿ ಮೂವರು ಅರ್ಷದೀಪ್..?

| Updated By: ಝಾಹಿರ್ ಯೂಸುಫ್

Updated on: Aug 02, 2022 | 12:54 PM

India vs West Indies: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 139 ರನ್​ಗಳ ಟಾರ್ಗೆಟ್​ ಅನ್ನು ವೆಸ್ಟ್ ಇಂಡೀಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

Team India: ಟೀಮ್ ಇಂಡಿಯಾದಲ್ಲಿ ಮೂವರು ಅರ್ಷದೀಪ್..?
Arshdeep Singh Jersey
Follow us on

ಭಾರತ-ವೆಸ್ಟ್ ಇಂಡೀಸ್ (India vs West Indies 2nd T20) ನಡುವಣ 2ನೇ ಟಿ20 ಪಂದ್ಯವು ಹಲವು ಕಾರಣಗಳಿಗೆ ಎಲ್ಲರ ಗಮನ ಸೆಳೆಯಿತು. ಮೊದಲಿಗೆ ಟೀಮ್ ಇಂಡಿಯಾ ಆಟಗಾರರ ಲಗೇಜ್ ತಡವಾಗಿ ಕೈ ಸೇರಿದ ಕಾರಣ ಪಂದ್ಯದ ಆರಂಭ ವಿಳಂಬವಾಯಿತು. ಅದರಂತೆ 8 ಗಂಟೆಗೆ ಶುರುವಾಗಬೇಕಿದ್ದ ಪಂದ್ಯವು ರಾತ್ರಿ 11 ಗೆ ಆರಂಭವಾಯಿತು. ಇದಾಗಿ ಪಂದ್ಯದಲ್ಲಿ ಟಾಸ್ ಸೋತರೂ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಅಚ್ಚರಿ ಎಂದರೆ ರೋಹಿತ್ ಶರ್ಮಾ ಜೊತೆ ಅರ್ಷದೀಪ್ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದನ್ನು ಕಂಡು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಒಂದು ಕ್ಷಣ ಹೌಹಾರಿದ್ದರು. ಆದರೆ ಆ ಬಳಿಕ ಅರ್ಷದೀಪ್ ಸಿಂಗ್ ಅವರ ಜೆರ್ಸಿಯಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಆಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಯಿತು.

ಇದಾದ ಬಳಿಕ ಬೌಲಿಂಗ್ ವೇಳೆ ಅವೇಶ್ ಖಾನ್ ಕೂಡ ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಮತ್ತೆ ಕಂಫ್ಯೂಸ್. ಏಕೆಂದರೆ ಫೀಲ್ಡಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್ ಅರ್ಷದೀಪ್ ಜೆರ್ಸಿಯಲ್ಲಿದ್ದರೆ, ಬೌಲಿಂಗ್​ನಲ್ಲಿ ಅವೇಶ್ ಖಾನ್ ಅರ್ಷದೀಪ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು.

ಮತ್ತೊಂದೆಡೆ ಅರ್ಷದೀಪ್ ಸಿಂಗ್ ತನ್ನದೇ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದರು. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಮೂವರು ಆಟಗಾರರು ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇತ್ತ ದೂರದಿಂದ ನೋಡಿದ್ರೆ ಎಲ್ಲೆಲ್ಲೂ ಅರ್ಷದೀಪ್ ಕಾಣಿಸಿಕೊಳ್ಳುತ್ತಿದ್ದರು. ಅತ್ತ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕೂಡ ಕಂಫ್ಯೂಸ್. ಇದೀಗ ಒಂದು ಜೆರ್ಸಿಯ ಮೂಲಕ ಎಲ್ಲೆಲ್ಲೂ ಅರ್ಷದೀಪ್ ಸಿಂಗ್ ಎಂದು ಟೀಮ್ ಇಂಡಿಯಾವನ್ನು ಟ್ರೋಲ್ ಮಾಡಲಾಗುತ್ತಿದೆ.

ಮೇಲ್ನೋಟಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಅವೇಶ್ ಖಾನ್ ಅರ್ಷದೀಪ್ ಅವರ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಮುಖ್ಯ ಕಾರಣ ಲಗೇಜ್ ತಡವಾಗಿ ಬಂದಿರುವುದು ಎನ್ನಲಾಗಿದೆ. ಎಲ್ಲಾ ಆಟಗಾರರ ಲಗೇಜ್ ಸರಿಯಾದ ಸಮಯಕ್ಕೆ ಕೈ ಸೇರದ ಕಾರಣ ತಮ್ಮದೇ ಅಳತೆಯಲ್ಲಿದ್ದ ಅರ್ಷದೀಪ್ ಸಿಂಗ್ ಜೆರ್ಸಿಯಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಅವೇಶ್ ಖಾನ್ ಕಣಕ್ಕಿಳಿದಿದ್ದರು ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬೇರೆಯವರ ಜೆರ್ಸಿಯಲ್ಲಿ ಇತರೆ ಆಟಗಾರರು ಕಣಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಆದರೆ ಒಂದೇ ಹೆಸರಿನ ಜೆರ್ಸಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು ಎನ್ನಬಹುದು.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 139 ರನ್​ಗಳ ಟಾರ್ಗೆಟ್​ ಅನ್ನು ವೆಸ್ಟ್ ಇಂಡೀಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನು ಮೂರನೇ ಟಿ20 ಪಂದ್ಯವು ಮಂಗಳವಾರ (ಆಗಸ್ಟ್ 2) ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಮತ್ತೆ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ.

 

 

Published On - 12:53 pm, Tue, 2 August 22