ಭಾರತದ ಐರ್ಲೆಂಡ್ ಪ್ರವಾಸ ಮುಕ್ತಾಯ: ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?
Team India's next match: ಭಾರತದ ಮುಂದಿನ ಟಾರ್ಗೆಟ್ ಏಷ್ಯಾಕಪ್ 2023. ಏಷ್ಯಾಕಪ್ ಟೂರ್ನಿಗೆ ಇದೇ ಆಗಸ್ಟ್ 30 ರಂದು ಚಾಲನೆ ಸಿಗಲಿದೆ. ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ಆಯೋಜಿಸಲಾಗಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಮ್ಯಾಚ್ ನಡೆಯಲಿದೆ.
ಭಾರತ ಕ್ರಿಕೆಟ್ ತಂಡದ ಐರ್ಲೆಂಡ್ (India vs Ireland) ಪ್ರವಾಸ ಮುಕ್ತಾಯಗೊಂಡಿದೆ. ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಐರಿಷ್ ನಾಡಿಗೆ ತೆರಳಿದ್ದ ಟೀಮ್ ಇಂಡಿಯಾ ಟಿ20 ಸರಣಿಯನ್ನು ಯಶಸ್ವಿಯಾಗಿ 2-0 ಅಂತರದಿಂದ ವಶಪಡಿಸಿಕೊಂಡಿದೆ. ಭಾರತದ ಕ್ಲೀನ್ಸ್ವೀಪ್ ಕನಸಿಗೆ ವರುಣ ಅಡ್ಡಿಪಡಿಸಿದ. ಬುಧವಾರ ನಡೆಯ ಬೇಕಿದ್ದ ಅಂತಿಮ ತೃತೀಯ ಟಿ20 ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದಾಯಿತು. ಇದೀಗ ಬುಮ್ರಾ ಪಡೆ ತವರಿಗೆ ಮರಳಲು ಸಜ್ಜಾಗುತ್ತಿದೆ. ಹಾಗಾದರೆ, ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ ನಡೆಯಲಿದೆ?, ಇಲ್ಲಿದೆ ಮಾಹಿತಿ.
ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿದೆ ಭಾರತ:
ಭಾರತದ ಮುಂದಿನ ಟಾರ್ಗೆಟ್ ಏಷ್ಯಾಕಪ್ 2023. ಏಷ್ಯಾಕಪ್ ಟೂರ್ನಿಗೆ ಇದೇ ಆಗಸ್ಟ್ 30 ರಂದು ಚಾಲನೆ ಸಿಗಲಿದೆ. ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ಆಯೋಜಿಸಲಾಗಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಮ್ಯಾಚ್ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡ ಮುಖಾಮುಖಿ ಆಗಲಿದೆ. ಭಾರತ ತಂಡ ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಅಧಿಕೃತವಾಗಿ ತಯಾರಿ ಪ್ರಾರಂಭಿಸಿದೆ. ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಎನ್‌ಸಿಎಗೆ ತಲುಪಿದ್ದಾರೆ. ಇಂದು ಏಷ್ಯಾಕಪ್‌ಗಾಗಿ ಭಾರತದ ತರಬೇತಿ ಶಿಬಿರಕ್ಕೆ ಚಾಲನೆ ದೊರೆಯಲಿದೆ. ರಾಹುಲ್ ದ್ರಾವಿಡ್ ಮತ್ತು ಟೀಮ್ ಇಂಡಿಯಾದ ಎಲ್ಲ ಆಟಗಾರರು ಎನ್ಸಿಎನಲ್ಲಿ ತರಭೇತಿ ಆರಂಭಿಸಲಿದ್ದಾರೆ. ಏಷ್ಯಾಕಪ್‌ಗೆ ಆಯ್ಕೆ ಆದ ಎಲ್ಲ ಆಟಗಾರರು ಇಲ್ಲಿ ಒಟ್ಟುಗೂಡಲಿದ್ದಾರೆ.
Asia Cup 2023: ಬೆಂಗಳೂರಿಗೆ ಬಂದ ಕೊಹ್ಲಿ, ರೋಹಿತ್: ಏಷ್ಯಾಕಪ್‌ಗೆ ತಯಾರಿ ಆರಂಭ
ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಜಸ್ಪ್ರಿತ್ ಬುಮ್ರಾ ಸದ್ಯ ಐರ್ಲೆಂಡ್ನಿಂದ ಹೊರಡಬೇಕಿದ್ದು ಮುಂದಿನ ಎರಡು ದಿನಗಳಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಏಷ್ಯಾಕಪ್ 2023 ತರಬೇತಿ ಶಿಬಿರವು ಆಗಸ್ಟ್ 29 ರವರೆಗೆ ಇರಲಿದೆ. ಭಾರತ- ವೆಸ್ಟ್ ಇಂಡೀಸ್ ಏಕದಿನ ಪಂದ್ಯಗಳ ಮುಕ್ತಾಯದ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರು. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಕೆರಿಬಿಯನ್‌ನಲ್ಲಿ ಟಿ20 ಸರಣಿಯನ್ನು ಆಡಿದ ನಂತರ ತವರಿಗೆ ಹಿಂತಿರುಗಿದ್ದರು. ಉಳಿದವರು ಭಾರತ-ಐರ್ಲೆಂಡ್ ಸರಣಿಗಾಗಿ ಡಬ್ಲಿನ್‌ಗೆ ಪ್ರಯಾಣಿಸಿದ್ದರು.
ಭಾರತ ತಂಡದ ನಾಯಕತ್ವ ರೋಹಿತ್ ಶರ್ಮಾ ವಹಿಸಿಕೊಂಡರೆ, ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಏಷ್ಯಾಕಪ್ ಮೂಲಕ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಅಚ್ಚರಿ ಎಂಬಂತೆ ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಶಿಖರ್ ಧವನ್, ಆರ್. ಅಶ್ವಿನ್, ಏಷ್ಯಾಕಪ್ ತಂಡದಿಂದ ಕೈಬಿಡಲಾಗಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಭಾರತ ಪರ ಕೇವಲ 8 ಟಿ20 ಪಂದ್ಯಗಳನ್ನಾಡಿರುವ ಹಾಗೂ ಒಂದೇ ಒಂದು ಏಕದಿನ ಪಂದ್ಯವನ್ನಾಡಿದ ಅನುಭವ ಹೊಂದಿರದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಸ್ಟ್ಯಾಂಡ್-ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಏಷ್ಯಾಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವಿಸಿ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹದ್ ಬುಮ್ರಾ. ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ