
2025 ರ ಏಷ್ಯಾಕಪ್‌ನ (Asia Cup 2025) 10 ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಯುಎಇ (Pakistan vs UAE) ತಂಡಗಳು ಇಂದು ಮುಖಾಮುಖಿಯಾಗಲಿವೆ . ಆದರೆ ಈ ಪಂದ್ಯಕ್ಕೂ ಮುನ್ನ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಒಂದು ನಡೆ ಕೋಲಾಹಲ ಸೃಷ್ಟಿಸಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಎಸಿಸಿ (ACC), ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಟ್ವಿಟರ್ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಎಸಿಸಿಯ ನಡೆ ಇದೀಗ ಈ ಪಂದ್ಯ ನಡೆಯುವುದಿಲ್ಲವೇ ಎಂಬ ಅನುಮಾನ ಸೃಷ್ಟಿಸಿದೆ. ಭಾರತ ವಿರುದ್ಧದ ಪಂದ್ಯದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಮುಂದಿನ ಪಂದ್ಯದಿಂದ ಹೊರಗಿಡದಿದ್ದರೆ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಆದರೆ ಪಾಕಿಸ್ತಾನದ ಈ ದೂರನ್ನು ಐಸಿಸಿ (ICC) ತಿರಸ್ಕರಿಸಿತ್ತು. ಇದೀಗ ಈ ಪಂದ್ಯದ ಪೋಸ್ಟರ್ ಡಿಲೀಟ್ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯದ ಪೋಸ್ಟರ್ ಅನ್ನು ಡಿಲೀಟ್ ಮಾಡಿದ್ದು, ಪಾಕಿಸ್ತಾನದ ಬಹಿಷ್ಕಾರದ ಬೆದರಿಕೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಪಾಕ್ ತಂಡವು ಇನ್ನು ಕೆಲವೇ ನಿಮಿಷಗಳಲ್ಲಿ ಹೋಟೆಲ್‌ನಿಂದ ಮೈದಾನಕ್ಕೆ ಪ್ರಯಾಣ ಬೆಳೆಸಬೇಕಾಗಿದೆ. ಇದೆಲ್ಲದರ ನಡುವೆ ಪೋಸ್ಟರ್ ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ವಾಸ್ತವವಾಗಿ ಪಾಕಿಸ್ತಾನ ತಂಡ ಬುಧವಾರ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಯನ್ನು ಸಹ ರದ್ದುಗೊಳಿಸಿತ್ತು. ಆದಾಗ್ಯೂ, ಪಾಕಿಸ್ತಾನ ತಂಡವು ಮಂಗಳವಾರ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ತನ್ನ ಅಭ್ಯಾಸವನ್ನು ಮುಂದುವರೆಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವಿಕೆಯ ಸುಳಿವನ್ನು ನೀಡಿತ್ತು.
ವರದಿಗಳ ಪ್ರಕಾರ, ಪಿಸಿಬಿ ಹಾಗೂ ಐಸಿಸಿ ಮ್ಯಾಚ್ ರೆಫರಿ ನಡುವಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಎರಡನೇ ಪತ್ರ ಬರೆದಿದೆ. ಪೈಕ್ರಾಫ್ಟ್ ಅವರನ್ನು ತಮ್ಮ ತಂಡದ ಪಂದ್ಯದಿಂದ ತೆಗೆದುಹಾಕಬೇಕೆಂಬುದು ಪಿಸಿಬಿ ದೂರಾಗಿದೆ. ಆದರೆ ಪಿಸಿಬಿ ದೂರಿಗೆ ಐಸಿಸಿ ಯಾವುದೇ ಸೊಪ್ಪು ಹಾಕಿಲ್ಲ. ಇದರಿಂದ ಮತ್ತಷ್ಟು ಕೆರಳಿರುವ ಪಾಕ್ ಮಂಡಳಿ ಪಂದ್ಯವನ್ನು ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದೆಯಾ ಎಂಬ ಅನುಮಾನ ಮೂಡಿದೆ. ಎಲ್ಲಾ ಪ್ರಶ್ನೆಗಳಿಗೂ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Wed, 17 September 25