Asia Cup 2025: ಪಾಕಿಸ್ತಾನ ಬಾಯಿ ಬಡಿದುಕೊಂಡರೂ ಮ್ಯಾಚ್ ರೆಫರಿಯನ್ನು ಬದಲಿಸದ ಐಸಿಸಿ
Pakistan vs UAE: ಪಾಕಿಸ್ತಾನ ಮತ್ತು ಯುಎಇ ನಡುವಿನ ಏಷ್ಯಾಕಪ್ ಪಂದ್ಯವು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಡುವಿನ ವಿವಾದದಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು. ಪಿಸಿಬಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕಲು ಒತ್ತಾಯಿಸಿತು, ಆದರೆ ಐಸಿಸಿ ಅವರನ್ನು ಬೆಂಬಲಿಸಿತು ಮತ್ತು ಪೈಕ್ರಾಫ್ಟ್ ಯಾವುದೇ ತಪ್ಪು ಮಾಡಿಲ್ಲ ಎಂದು ಘೋಷಿಸಿತು. ಪೈಕ್ರಾಫ್ಟ್ ಪಾಕಿಸ್ತಾನದ ನಾಯಕನ ಬಳಿ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ. ಪಂದ್ಯದ ವಿಳಂಬಕ್ಕೆ ಪಿಸಿಬಿಯ ಹಠಮಾರಿತನವೇ ಕಾರಣ ಎಂದು ಹೇಳಲಾಗಿದೆ.

ಪಾಕಿಸ್ತಾನ ಮತ್ತು ಯುಎಇ (Pakistan vs UAE) ನಡುವಿನ ಪಂದ್ಯ 1 ಗಂಟೆ ತಡವಾಗಿ ಆರಂಭವಾಗಲಿದೆ. ಇದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಠಮಾರಿತನ. ಪಿಸಿಬಿ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ (Andy Pycroft) ಅವರನ್ನು ಈ ಪಂದ್ಯಾವಳಿಯಿಂದ ಹೊರಹಾಕಲು ಇನ್ನಿಲ್ಲದ ಕಸರತ್ತು ಮಾಡಿತು. ಆದಾಗ್ಯೂ ಐಸಿಸಿ (ICC) ಮಾತ್ರ ಪಾಕಿಸ್ತಾನದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ಆಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿಯಾಗಿ ಮುಂದುವರೆಸಲು ನಿರ್ಧರಿಸಿದೆ. ವಾಸ್ತವವಾಗಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕುವಂತೆ ಪಿಸಿಬಿ, ಐಸಿಸಿಗೆ ಎರಡು ಇಮೇಲ್‌ಗಳನ್ನು ಬರೆದಿತ್ತು. ಆದರೆ ಆ ಎರಡನ್ನೂ ಐಸಿಸಿ ತಿರಸ್ಕರಿಸಿದೆ.
ಮೊದಲೇ ನಿರ್ಧರಿಸಿರುವಂತೆ ಯುಎಇ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆಂಡಿ ಪೈಕ್ರಾಫ್ಟ್ ಪಂದ್ಯದ ರೆಫರಿಯಾಗಿದ್ದರು. ಈ ಪಂದ್ಯಕ್ಕೆ ಅವರು ರೆಫರಿ ಆದರೆ ನಾವು ಪಂದ್ಯಾವಳಿಯನ್ನು ಬಹಿಷ್ಕರಿಸುತ್ತೇವೆ ಎಂದು ಪಿಸಿಬಿ, ಐಸಿಸಿಗೆ ಬೆದರಿಕೆ ಹಾಕಿತ್ತು. ಆದರೆ ಪಾಕಿಸ್ತಾನದ ಬೆದರಿಕೆಗೆ ಬಗ್ಗದ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿ ಪ್ಯಾನೆಲ್ ಮತ್ತು ಏಷ್ಯಾಕಪ್ ಪಂದ್ಯದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಐಸಿಸಿ, ಪಿಸಿಬಿಗೆ ಇಮೇಲ್ ಮೂಲಕ ಮ್ಯಾಚ್ ರೆಫರಿಯ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಉತ್ತರಿಸಿದೆ.
ಪೈಕ್ರಾಫ್ಟ್ ಬೆಂಬಲಕ್ಕೆ ನಿಂತ ಐಸಿಸಿ
ಐಸಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಈ ಬಗ್ಗೆ ತನಿಖೆ ನಡೆಸಿದ್ದು, ಪೈಕ್ರಾಫ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ. ಐಸಿಸಿ ಪ್ರಕಾರ, ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಆಘಾ ಅವರಿಗೆ ಟಾಸ್‌ನಲ್ಲಿ ಕೈಕುಲುಕದಂತೆ ವಿವೇಚನೆಯಿಂದ ಸಲಹೆ ನೀಡುವ ಮೂಲಕ ಪೈಕ್ರಾಫ್ಟ್ ಎರಡೂ ನಾಯಕರಿಗೆ ಆಗಬಹುದಾದ ಮುಜುಗರವನ್ನು ತಡೆಯಲು ಸಹಾಯ ಮಾಡಿದ್ದಾರೆ. ಹೀಗಾಗಿ ಪೈಕ್ರಾಫ್ಟ್ ಯಾವುದೇ ಪಂದ್ಯದ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿಲ್ಲ. ಆದಾಗ್ಯೂ ಪಿಸಿಬಿಗೆ ದೂರು ನೀಡುವ ಎಲ್ಲ ಹಕ್ಕಿದೆ. ಆದರೆ ತನಿಖೆಯ ಬಳಿಕ ಮ್ಯಾಚ್ ರೆಫರಿ ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದೆ. ಐಸಿಸಿಯ ಈ ನಿರ್ಧಾರದ ಹೊರತಾಗಿಯೂ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.
Asia Cup 2025: 1 ಗಂಟೆ ಸಮಯಾವಕಾಶ ಕೇಳಿದ ಪಾಕಿಸ್ತಾನ; ಪಂದ್ಯ ಆರಂಭ ವಿಳಂಬ
ಆಂಡಿ ಪೈಕ್ರಾಫ್ಟ್ ಯಾರು?
ಆಂಡಿ ಪೈಕ್ರಾಫ್ಟ್ ಜಿಂಬಾಬ್ವೆಯವರಾಗಿದ್ದು, 3 ಟೆಸ್ಟ್ ಮತ್ತು 20 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪೈಕ್ರಾಫ್ಟ್ 1983 ರಲ್ಲಿ ಜಿಂಬಾಬ್ವೆ ತಂಡದ ಭಾಗವಾಗಿದ್ದರು. 2009 ರಲ್ಲಿ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಸೇರಿದ ಪೈಕ್ರಾಫ್ಟ್ ಒಟ್ಟು 103 ಟೆಸ್ಟ್, 248 ಏಕದಿನ ಮತ್ತು 183 ಟಿ20 ಪಂದ್ಯಗಳಲ್ಲಿ ಐಸಿಸಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಂಡಿ ಪೈಕ್ರಾಫ್ಟ್ ಮತ್ತು ಪಾಕಿಸ್ತಾನ ನಡುವೆ ಈ ಹಿಂದೆಯೂ ವಿವಾದ ಸೃಷ್ಟಿಯಾಗಿತ್ತು. ವಾಸ್ತವವಾಗಿ ಮೊಹಮ್ಮದ್ ಹಫೀಜ್ ಮತ್ತು ಸಯೀದ್ ಅಜ್ಮಲ್ ಅವರ ಬೌಲಿಂಗ್ ಶೈಲಿಯನ್ನು ಕಾನೂನುಬಾಹಿರವೆಂದು ಅಂದಿನ ಮ್ಯಾಚ್ ರೆಫರಿ ಆಗಿದ್ದ ಪೈಕ್ರಾಫ್ಟ್ ಘೋಷಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Wed, 17 September 25
