Asia Cup 2025: 1 ಗಂಟೆ ಸಮಯಾವಕಾಶ ಕೇಳಿದ ಪಾಕಿಸ್ತಾನ; ಪಂದ್ಯ ಆರಂಭ ವಿಳಂಬ
Asia Cup 2025: ಏಷ್ಯಾಕಪ್‌ನಲ್ಲಿ ಯುಎಇ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಒಂದು ಗಂಟೆ ತಡವಾಗಿ ಆರಂಭಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂಪೈರ್ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಐಸಿಸಿಗೆ ದೂರು ನೀಡಿತ್ತು ಆದರೆ ಐಸಿಸಿ ನಿರಾಕರಿಸಿತು. ಇದರಿಂದ ಕೆರಳಿರುವ ಪಿಸಿಬಿ ಟೂರ್ನಿಯಿಂದ ಹಿಂಪಡೆಯುವ ಬೆದರಿಕೆ ಹಾಕಿದೆ. ಪಂದ್ಯ ಆರಂಭವಾಗುವುದೋ ಇಲ್ಲವೋ ಎಂಬುದು ಅನಿಶ್ಚಿತ. ಪಾಕಿಸ್ತಾನ ತನ್ನ ನಿಲುವನ್ನು ಸ್ಪಷ್ಟಪಡಿಸಲು ಒಂದು ಗಂಟೆ ಸಮಯ ಕೇಳಿದೆ.

ಏಷ್ಯಾಕಪ್‌ನಲ್ಲಿ (Asia Cup) ಇಂದು ನಡೆಯಬೇಕಿದ್ದ ಯುಎಇ ಹಾಗೂ ಪಾಕಿಸ್ತಾನ (UAE vs Pakistan) ನಡುವಿನ ಪಂದ್ಯ 1 ಗಂಟೆ ತಡವಾಗಿ ಆರಂಭವಾಗಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಪಂದ್ಯಾವಳಿಯಿಂದ ವಜಾಗೊಳಿಸುವಂತೆ ಈ ಹಿಂದೆ ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಆದರೆ ಐಸಿಸಿ ಮಾತ್ರ ಆ ರೀತಿಯ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನಿರಾಕರಿಸಿತು. ಇದರಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆಯಲು ನಿರ್ಧರಿಸಿದೆ ಎಂತಲೂ ವರದಿಯಾಗಿದೆ. ಯಾವುದಕ್ಕೂ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ 1 ಗಂಟೆ ಸಮಯಾವಕಾಶ ಕೇಳಿದೆ ಎಂದು ವರದಿಯಾಗಿದೆ. ಪೂರ್ವ ನಿಗದಿಯಂತೆ ಇಂದು ರಾತ್ರಿ 8 ಗಂಟೆಗೆ ಪಾಕಿಸ್ತಾನ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ದುಬೈನಲ್ಲಿ ಆಡಬೇಕಿತ್ತು. ಆದಾಗ್ಯೂ ಪಾಕ್ ತಂಡದ ಆಟಗಾರರು ಪಂದ್ಯಕ್ಕೆ ಇನ್ನು ಕೆಲವೇ ನಿಮಿಷಗಳು ಇದ್ದರೂ ಇನ್ನೂ ತನ್ನ ಹೋಟೆಲ್‌ನಲ್ಲಿಯೇ ಇದ್ದಾರೆ. ಹೀಗಾಗಿ ಪಂದ್ಯ ನಡೆಯುತ್ತದೋ, ಇಲ್ಲವೋ ಎಂಬುದು ಮುಂದಿನ 1 ಗಂಟೆಯೊಳಗೆ ತಿಳಿಯಲಿದೆ.
ಪಿಸಿಬಿ- ಐಸಿಸಿ ನಡುವೆ ತುರ್ತು ಸಭೆ
ಯುಎಇ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನ ತಂಡವು ಸಂಜೆ 6 ಗಂಟೆಗೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಆಗಮಿಸಬೇಕಿತ್ತು. ಆದರೆ ಸಮಯ ಮುಗಿದರೂ ಹೋಟೆಲ್‌ನಲ್ಲಿಯೇ ಉಳಿದಿತ್ತು. ವರದಿ ಪ್ರಕಾರ ಪಿಸಿಬಿ ಮತ್ತು ಐಸಿಸಿ ನಡುವೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ ಕೊನೆಗೂ ಪಾಕ್ ತಂಡ ಪಂದ್ಯವನ್ನು ಅಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
Asia Cup 2025: ಪಂದ್ಯದ ಪೋಸ್ಟರ್ ಡಿಲೀಟ್; ಪಾಕಿಸ್ತಾನ- ಯುಎಇ ನಡುವಿನ ಪಂದ್ಯ ರದ್ದು?
ರೆಫರಿ ಬಗ್ಗೆ ಪಾಕ್ ಅಸಮಾಧಾನ
ಭಾರತ ವಿರುದ್ಧದ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮ್ಯಾಚ್ ರೆಫರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು, ಆದರೆ ಐಸಿಸಿ ನಿರಾಕರಿಸಿತು. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಎರಡೂ ತಂಡಗಳಿಗೆ ಹ್ಯಾಂಡ್‌ಶೇಕ್ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ. ಆದರೆ ಐಸಿಸಿಗೆ ಮಾತ್ರ ಈ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಐಸಿಸಿ ಮ್ಯಾಚ್ ರೆಫರಿಯನ್ನು ಪಂದ್ಯದಿಂದ ಹೊರಗಿಡಲು ನಿರಾಕರಿಸಿತು. ತರುವಾಯ ಪಿಸಿಬಿ ಐಸಿಸಿಗೆ ಎರಡನೇ ಬಾರಿಗೆ ಈ ಬಗ್ಗೆ ಇಮೇಲ್ ಕಳುಹಿಸಿತ್ತು. ಅದನ್ನು ಸಹ ಐಸಿಸಿ ಮತ್ತೆ ತಿರಸ್ಕರಿಸಲಾಯಿತು. ಆದಾಗ್ಯೂ ಸಭೆಯಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Wed, 17 September 25
