IND W vs AUS W: ವಿಶ್ವ ದಾಖಲೆ.. 18 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಸೋಲಿಸಿದ ಟೀಂ ಇಂಡಿಯಾ
IND W vs AUS W: ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು 102 ರನ್‌ಗಳಿಂದ ಸೋಲಿಸಿ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಸ್ಮೃತಿ ಮಂಧಾನ ಅವರ ಶತಕ ಮತ್ತು ಕ್ರಾಂತಿ ಗೌಡ್ ಅವರ ಅದ್ಭುತ ಬೌಲಿಂಗ್ ಈ ಗೆಲುವಿಗೆ ಪ್ರಮುಖ ಕಾರಣ. 18 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು ತವರಿನಲ್ಲಿ ಸೋಲಿಸಿದ ಭಾರತ, ಆಸ್ಟ್ರೇಲಿಯಾ ವಿರುದ್ಧ ಅತಿದೊಡ್ಡ ಗೆಲುವು ದಾಖಲಿಸಿದೆ.

2025 ರ ಮಹಿಳಾ ಏಕದಿನ ವಿಶ್ವಕಪ್‌ಗೂ (Women’s ODI World Cup 2025) ಮೊದಲು ಸಿದ್ಧತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ (IND W vs AUS W) ಸರಣಿಯನ್ನಾಡುತ್ತಿರುವ ಭಾರತ ವನಿತಾ ಪಡೆ ವಿಶ್ವ ಚಾಂಪಿಯನ್ನರ ವಿರುದ್ಧ ಅದ್ಭುತ ಗೆಲುವು ದಾಖಲಿಸಿದೆ. ಉಭಯ ತಂಡಗಳ ನಡುವೆ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಇದೀಗ ಮೊದಲ ಪಂದ್ಯದ ಸೋಲಿನಿಂದ ಚೇತರಿಸಿಕೊಂಡಿರುವ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದುಕೊಂಡಿತು. ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಅವರ ಶತಕ ಮತ್ತು ಯುವ ವೇಗಿ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು 102 ರನ್‌ಗಳಿಂದ ಸೋಲಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಈ ಗೆಲುವಿನ ಅತ್ಯಂತ ವಿಶೇಷವೆಂದರೆ 18 ವರ್ಷಗಳ ನಂತರ ಭಾರತ ತಂಡವು ಆಸ್ಟ್ರೇಲಿಯಾವನ್ನು ತನ್ನ ತವರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೋಲಿಸಿದೆ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಅತಿದೊಡ್ಡ ಗೆಲುವು ದಾಖಲಿಸಿದ ಮೊದಲ ತಂಡವೆಂಬ ದಾಖಲೆಯನ್ನು ಬರೆದಿದೆ.
ಸ್ಫೋಟಕ ಶತಕ ಬಾರಿಸಿದ ಸ್ಮೃತಿ
ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮತ್ತೊಮ್ಮೆ, ಆರಂಭಿಕ ಜೋಡಿ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಅವರಿಂದ ಉತ್ತಮ ಆರಂಭವನ್ನು ಪಡೆದುಕೊಂಡಿತು. ಇವರಿಬ್ಬರು 70 ರನ್‌ಗಳ ಜೊತೆಯಾಟ ನೀಡಿದರು. ಪ್ರತಿಕಾ ಔಟಾದ ಹೊರತಾಗಿಯೂ, ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಮಂಧಾನ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕವೂ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಸ್ಮೃತಿ ಕೇವಲ 77 ಎಸೆತಗಳಲ್ಲಿ ತಮ್ಮ 12 ನೇ ಶತಕವನ್ನು ಪೂರೈಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತದ ಅತ್ಯಂತ ವೇಗದ ಶತಕ ಎಂಬ ದಾಖಲೆಯನ್ನು ಬರೆಯಿತು. ಸ್ಮೃತಿ ನಂತರ ಬಂದ ದೀಪ್ತಿ ಶರ್ಮಾ, ಸ್ನೇಹ್ ರಾಣಾ ಮತ್ತು ರಿಚಾ ಘೋಷ್ ತಂಡವನ್ನು 292 ರನ್‌ಗಳಿಗೆ ಕೊಂಡೊಯ್ದರು.
World Cup 2027: 3 ದೇಶಗಳು, 54 ಪಂದ್ಯಗಳು; 2027 ರ ಏಕದಿನ ವಿಶ್ವಕಪ್ಗೆ ಸ್ಥಳ ನಿಗದಿ
190 ರನ್‌ಗಳಿಗೆ ಆಸೀಸ್ ಆಲೌಟ್
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಐದನೇ ಓವರ್ ವೇಳೆಗೆ, ಆರಂಭಿಕರಿಬ್ಬರೂ ಕೇವಲ 12 ರನ್‌ಗಳಿಗೆ ಔಟಾದರು. ಭಾರತದ ಪರವಾಗಿ ರೇಣುಕಾ ಸಿಂಗ್ ಮತ್ತು ಕ್ರಾಂತಿ ಗೌಡ್ ಎರಡೂ ವಿಕೆಟ್‌ಗಳನ್ನು ಪಡೆದರು. ಬೆತ್ ಮೂನಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಆಸ್ಟ್ರೇಲಿಯಾದ ಮೂರನೇ ವಿಕೆಟ್ 62 ರನ್‌ಗಳಿಗೆ ಪತನವಾಯಿತು. 25 ನೇ ಓವರ್‌ನಲ್ಲಿ ಸ್ಪಿನ್ನರ್ ರಾಧಾ ಯಾದವ್ ತಮ್ಮದೇ ಬೌಲಿಂಗ್‌ನಲ್ಲಿ ಎಲಿಸ್ ಪೆರ್ರಿ ಅವರನ್ನು ಪೆವಿಲಿಯನ್ಗಟ್ಟಿದರು. ಇದರ ನಂತರ ಆಸ್ಟ್ರೇಲಿಯಾದ ಪೆವಿಲಿಯನ್ ಪರೇಡ್ ಶುರುವಾಯಿತು. ಅಂತಿಮವಾಗಿ ಇಡೀ ತಂಡವು ಕೇವಲ 190 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ, ಕ್ರಾಂತಿ 9.3 ಓವರ್‌ಗಳಲ್ಲಿ ಕೇವಲ 28 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
42 ವರ್ಷಗಳ ಹಳೆಯ ದಾಖಲೆ
ಟೀಂ ಇಂಡಿಯಾಗೆ ಈ ಗೆಲುವು ಬಹಳ ವಿಶೇಷವಾಗಿತ್ತು. ಏಕೆಂದರೆ 18 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ತವರು ನೆಲದಲ್ಲಿ ಏಕದಿನ ಪಂದ್ಯದಲ್ಲಿ ಸೋಲಿಸಿದ ದಾಖಲೆಯನ್ನು ಭಾರತ ವನಿತಾ ಪಡೆ ಬರೆಯಿತು. ಇದಕ್ಕೂ ಮೊದಲು 2007 ರಲ್ಲಿ ಚೆಪಾಕ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದಲ್ಲದೆ, ಇದು ಆಸ್ಟ್ರೇಲಿಯಾ ವಿರುದ್ಧ ಯಾವುದೇ ತಂಡವು ಗಳಿಸಿದ ಅತಿದೊಡ್ಡ ಏಕದಿನ ಗೆಲುವಾಗಿದೆ. ಈ ಮೂಲಕ ಟೀಂ ಇಂಡಿಯಾ 42 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು, 1973 ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾವನ್ನು 92 ರನ್‌ಗಳಿಂದ ಸೋಲಿಸಿತ್ತು. ಇದಲ್ಲದೆ, ಈ ಪಂದ್ಯವು ಆಸ್ಟ್ರೇಲಿಯಾದ 13 ಪಂದ್ಯಗಳ ಗೆಲುವಿನ ಸರಣಿಯನ್ನು ಸಹ ಕೊನೆಗೊಳಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
