
2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಮಣಿಸಿದ್ದ ಟೀಂ ಇಂಡಿಯಾ (India vs Pakistan) 9ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಸೆಪ್ಟೆಂಬರ್ 28 ರಂದು ನಡೆದಿದ್ದ ಈ ಪಂದ್ಯವನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾಕ್ಕೆ ನಾಲ್ಕು ದಿನ ಕಳೆದರು ಏಷ್ಯಾಕಪ್ ಟ್ರೋಫಿ ಮಾತ್ರ ಕೈಸೇರಿಲ್ಲ. ಇದಕ್ಕೆ ಕಾರಣ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi). ಟೀಂ ಇಂಡಿಯಾ ತನ್ನ ಕೈನಿಂದ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ಸಹಿಸದ ನಖ್ವಿ, ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್ಗಳನ್ನು ಭಾರತ ತಂಡಕ್ಕೆ ನೀಡದೆ, ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದರು.
ಇತ್ತ ಮೊಹ್ಸಿನ್ ನಖ್ವಿ ಈ ನಡೆಗೆ ಸೊಪ್ಪು ಹಾಕದ ಟೀಂ ಇಂಡಿಯಾ ಟ್ರೋಫಿ ಇಲ್ಲದೆಯೇ ಸಂಭ್ರಮಾಚರಣೆ ನಡೆಸಿತ್ತು. ಇದಾದ ಬಳಿಕ ಮೊಹ್ಸಿನ್ ನಖ್ವಿ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಚಾಂಪಿಯನ್ ತಂಡಕ್ಕೆ ನೀಡಬೇಕಿದ್ದ ಟ್ರೋಫಿಯನ್ನು ಕೂಡಲೇ ಹಿಂದಿರುಗಿಸಬೇಕೆಂದು ಒತ್ತಾಯಿಸಿತ್ತು. ಇದೀಗ ಬಿಸಿಸಿಐ ಒತ್ತಡಕ್ಕೆ ಮಣಿದಿರುವ ನಖ್ವಿ ಟ್ರೋಫಿಯನ್ನು ಭಾರತ ತಂಡಕ್ಕೆ ನೀಡಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.
ಏಷ್ಯಾಕಪ್ ಫೈನಲ್ ಮುಗಿದ ಬಳಿಕ ತನ್ನದೇ ವಾದವನ್ನು ಮುಂದಿಟ್ಟುಕೊಂಡು ಹಠಮಾರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ತನ್ನೆಲ್ಲ ದುರಹಂಕಾರವನ್ನು ಬದಿಗಿಟ್ಟು ಬಿಸಿಸಿಐ ಮುಂದೆ ಮಂಡಿಯೂರಿದೆ. ನಖ್ವಿ ತೆಗೆದುಕೊಂಡು ಹೋಗಿದ್ದ ಏಷ್ಯಾಕಪ್ ಟ್ರೋಫಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ಟ್ರೋಫಿಯನ್ನು ಬಿಸಿಸಿಐಗೆ ಹಸ್ತಾಂತರಿಸಲಾಗುವುದು ಎಂದು ವರದಿಯಾಗಿದೆ.
Asia Cup 2025: ‘ಕೇವಲ ಬೆಳ್ಳಿ ಪಾತ್ರೆ’; ಟ್ರೋಫಿಯೊಂದಿಗೆ ಓಡಿಹೋದ ನಖ್ವಿಗೆ ಸೂರ್ಯ ತಿರುಗೇಟು
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅಜೇಯವಾಗಿ ಉಳಿದು ಏಷ್ಯಾಕಪ್ ಗೆದ್ದಿತು. ಆ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೊಹ್ಸಿನ್, ಎಸಿಸಿಯ ಪ್ರಸ್ತುತ ಅಧ್ಯಕ್ಷರಾಗಿರುವ ಕಾರಣ ಟ್ರೋಫಿಯನ್ನು ಪ್ರದಾನ ಮಾಡಲು ಬಂದಿದ್ದರು. ಆದರೆ ಟೀಂ ಇಂಡಿಯಾ ಮೊಹ್ಸಿನ್ ಅವರಿಂದ ಅದನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಕಾರಣವನ್ನು ನೀಡಿದ್ದ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದಲ್ಲಿ ಸಚಿವರೂ ಆಗಿರುವ ಕಾರಣ ನಾವು ಅವರಿಂದ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂದಿತ್ತು. ಆದಾಗ್ಯೂ, ಮೊಹ್ಸಿನ್ ನಾಚಿಕೆಯಿಲ್ಲದೆ ವೇದಿಕೆಯ ಮೇಲೆ ನಿಂತಿದ್ದರು. ನಂತರ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೊರಟುಹೋಗಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Wed, 1 October 25