
ಬೆಂಗಳೂರು (ಸೆ. 08): 2025 ರ ಏಷ್ಯಾ ಕಪ್ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎಲ್ಲ ಎಂಟು ತಂಡಗಳು ತಮ್ಮ ತಂಡಗಳನ್ನು ಸಹ ಪ್ರಕಟಿಸಿವೆ. ಇದು ಏಕದಿನ ಮತ್ತು ಟಿ- 20 ಸ್ವರೂಪಗಳನ್ನು ಒಳಗೊಂಡಂತೆ ಏಷ್ಯಾ ಕಪ್‌ನ 17 ನೇ ಆವೃತ್ತಿಯಾಗಲಿದ್ದು, ಎಲ್ಲಾ ತಂಡಗಳು ಇದಕ್ಕಾಗಿ ಸಜ್ಜಾಗಿವೆ. ಟೀಮ್ ಇಂಡಿಯಾ (Team India) ಕೂಡ ಹೊಸ ಜೆರ್ಸಿಯೊಂದಿಗೆ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಏಷ್ಯಾ ಕಪ್‌ನ ಮೊದಲ ಆವೃತ್ತಿಯನ್ನು 41 ವರ್ಷಗಳ ಹಿಂದೆ ಮೊದಲ ಬಾರಿ ಆಡಲಾಯಿತು.
ಮೊದಲ ಆವೃತ್ತಿಯಲ್ಲಿ ಕೇವಲ ಮೂರು ತಂಡಗಳು ಭಾಗವಹಿಸಿದ್ದವು
ಮೊದಲ ಏಷ್ಯಾಕಪ್ ಆವೃತ್ತಿಯನ್ನು 1984 ರಲ್ಲಿ ನಡೆಸಲಾಯಿತು. ಆಗ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಎಂಬ ಮೂರು ತಂಡಗಳು ಮಾತ್ರ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು ಮತ್ತು ಪಂದ್ಯಾವಳಿಯನ್ನು ರೌಂಡ್ ರಾಬಿನ್ ಆಗಿ ನಡೆಸಲಾಯಿತು, ಇದರಲ್ಲಿ ಪ್ರತಿ ತಂಡವು ಎರಡು ಪಂದ್ಯಗಳನ್ನು ಆಡಿತು. ಈ ರೀತಿಯಾಗಿ, ಪಂದ್ಯಾವಳಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ನಡೆಸಲಾಯಿತು. ಫೈನಲ್ ಪಂದ್ಯ ಎಂದು ಇದರಲ್ಲಿ ಇರಲಿಲ್ಲ.
ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದಿತ್ತು.
1984 ರ ಏಷ್ಯಾಕಪ್‌ನ ಮೊದಲ ಪಂದ್ಯವು ದುಲೀಪ್ ಮೆಂಡಿಸ್ ನೇತೃತ್ವದ ಶ್ರೀಲಂಕಾ ತಂಡ ಮತ್ತು ಜಹೀರ್ ಅಬ್ಬಾಸ್ ನೇತೃತ್ವದ ಪಾಕಿಸ್ತಾನ ತಂಡದ ನಡುವೆ ನಡೆಯಿತು. ಶ್ರೀಲಂಕಾ ಐದು ವಿಕೆಟ್‌ಗಳಿಂದ ಗೆದ್ದಿತು. ಇದರ ನಂತರ, ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡವು ಶ್ರೀಲಂಕಾ ವಿರುದ್ಧದ ತನ್ನ ಮೊದಲ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದಿತು. ಬಳಿಕ, ಪಾಕಿಸ್ತಾನ ವಿರುದ್ಧ 54 ರನ್‌ಗಳಿಂದ ಜಯಗಳಿಸಿತು.
ಭಾರತ ತಂಡ ವಿಜೇತರಾದರು
ಭಾರತ ತಂಡವು ತನ್ನ ಎರಡೂ ಪಂದ್ಯಗಳಲ್ಲಿ ಜಯಗಳಿಸಿ 8 ಅಂಕಗಳನ್ನು ಗಳಿಸಿದ್ದರಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನದ ವಿರುದ್ಧ ಒಂದು ಪಂದ್ಯವನ್ನು ಗೆದ್ದು ನಾಲ್ಕು ಅಂಕಗಳನ್ನು ಗಳಿಸಿತ್ತು. ಪಾಕಿಸ್ತಾನ ತಂಡವು ತನ್ನ ಎರಡೂ ಪಂದ್ಯಗಳಲ್ಲಿ ಸೋತಿತು. ಇದರಿಂದಾಗಿ, ತನ್ನ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡವನ್ನು ವಿಜೇತರೆಂದು ಘೋಷಿಸಲಾಯಿತು.
2025 ರ ಏಷ್ಯಾ ಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ
ಏಷ್ಯಾ ಕಪ್ ಆಯೋಜಿಸುವ ಹಕ್ಕನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೊಂದಿದೆ. ಈ ಬಾರಿ ಭಾರತ ಆತಿಥೇಯ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ನಂತರ, ಇದು ತಟಸ್ಥ ಸ್ಥಳದಲ್ಲಿ (ಯುಎಇ) ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು 2025 ರ ಏಷ್ಯಾ ಕಪ್‌ನಲ್ಲಿ ಭಾಗವಹಿಸುತ್ತಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ