
ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2026 ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲಿದೆ. ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮೊದಲು ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತಿದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಟೀಂ ಇಂಡಿಯಾ ಟಾಸ್ ಗೆದ್ದಿದ್ದು ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಈ ಪಂದ್ಯಾವಳಿಯಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತ ತಂಡ ಫೈನಲ್ಗೆ ತಲುಪಿದ್ದರೆ, ಇತ್ತ ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಶ್ರೀಲಂಕಾ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಭಾರತ ತಂಡವು ಟೂರ್ನಿಯ ಇತಿಹಾಸದಲ್ಲಿ ಪ್ರತಿ ಬಾರಿಯೂ ಫೈನಲ್ ತಲುಪಿದ್ದು, 8 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತ ಶ್ರೀಲಂಕಾ ಕಳೆದ ಆವೃತ್ತಿಯಲ್ಲಿ ಇದೇ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕುತೂಹಲ ಮೂಡಿಸಿದೆ.
ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡವು ತನ್ನ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ. ಇಡೀ ಪಂದ್ಯಾವಳಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಪ್ರತೀಕಾ ರಾವಲ್ ಬದಲಿಗೆ ಗುಣಾಲನ್ ಕಮಲಿನಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಶ್ರೀಲಂಕಾ ಕೂಡ ತನ್ನ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ.
ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್ಪ್ರೀತ್ ಕೌರ್ (ನಾಯಕಿ), ಜಿ ಕಮಲಿನಿ (ಪ್ರತಿಕಾ ರಾವಲ್ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಭಾರತಿ ಫುಲ್ಮಾಲಿ, ಪ್ರೇಮಾ ರಾವತ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ.
ಶ್ರೀಲಂಕಾ ಮಹಿಳಾ ತಂಡ: ಚಾಮರಿ ಅಟಾಪಟು (ನಾಯಕಿ), ಇಮೇಶಾ ದುಲಾನಿ, ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ಯಂಗನಾ (ವಿಕೆಟ್ ಕೀಪರ್), ಸುಗಂದಿಕಾ ಕುಮಾರಿ, ಚಾಮುದಿ ಪ್ರಬೋದಾ, ಮಿಥಾಲಿ ಅಯೋಧ್ಯೆ.
Published On - 7:45 pm, Sun, 13 September 26