AUS vs ZIM: ಆಸ್ಟ್ರೇಲಿಯಾ 141 ರನ್ಗೆ ಆಲೌಟ್: ಕಾಂಗರೂಗಳ ನಾಡಿನಲ್ಲಿ ಇತಿಹಾಸ ರಚಿಸಿದ ಜಿಂಬಾಬ್ವೆ ತಂಡ
Ryan Burl AUS vs ZIM: ಐತಿಹಾಸಿಕ ಗೆಲುವು ಸಾಧಿಸಬೇಕೆಂದು ಪಣತೊಟ್ಟ ಜಿಂಬಾಬ್ವೆ ನಾಯಕ ರೆಜಿಸ್ ಚಕಬ್ವಾ 72 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಮೊಟ್ಟ ಮೊದಲ ಜಯ ಸಾಧಿಸಿದೆ.
ಜಿಂಬಾಬ್ವೆ ಕ್ರಿಕೆಟ್ ತಂಡ ಆಸ್ಟ್ರೇಲಿಯಾ (Australia vs Zimbabwe) ನೆಲದಲ್ಲಿ ಇತಿಹಾಸ ರಚಿಸಿದೆ. ಅಂತಿಮ ತೃತೀಯ ಏಕದಿನ ಪಂದ್ಯದಲ್ಲಿ 3 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಜಿಂಬಾಬ್ವೆ (Zimbabwe Cricket Team) ಕಾಂಗರೂಗಳ ನಾಡಿನಲ್ಲಿ ಚೊಚ್ಚಲ ಪಂದ್ಯ ಗೆದ್ದ ಸಾಧನೆ ಮಾಡಿದೆ. ಅಷ್ಟೇ ಅಲ್ಲದೆ ಶ್ರೇಷ್ಠ ಪ್ರದರ್ಶನ ತೋರಿದ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಕೇವಲ 141 ರನ್ಗೆ ಆಲೌಟ್ ಮಾಡುವ ಮೂಲಕ ಪರಾಕ್ರಮ ಮೆರೆಯಿತು. ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದಿದ್ದರೂ, ಮೊದಲ ಎರಡು ಪಂದ್ಯದಲ್ಲಿ ಆ್ಯರೋನ್ ಫಿಂಚ್ (Aaron Finch) ಪಡೆ ಜಯ ಸಾಧಿಸಿದ್ದ ಕಾರಣ 2-1 ಅಂತರದಿಂದ ಆಸೀಸ್ ಸರಣಿ ವಶಪಡಿಸಿಕೊಂಡಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಜಿಂಬಾಬ್ವೆ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಆಸ್ಟ್ರೇಲಿಯಾ 31 ಓವರ್ಗಳಲ್ಲಿ 141 ರನ್ಗೆ ಆಲೌಟ್ ಆಯಿತು. ಇದರಲ್ಲಿ ಬಹುಪಾಲು ಡೇವಿಡ್ ವಾರ್ನರ್ ಅವರದ್ದೇ ಆಗಿತ್ತು. 96 ಎಸೆತಗಳಲ್ಲಿ 14 ಫೋರ್, 2 ಸಿಕ್ಸರ್ ಬಾರಿಸಿ ವಾರ್ನರ್ 94 ರನ್ ಸಿಡಿಸಿದರು. ಇವರು ಬಿಟ್ಟರೆ ಗ್ಲೆನ್ ಮ್ಯಾಕ್ಸ್ವೆಲ್ 19 ರನ್ ಗಳಿಸಿದ್ದೇ ಹೆಚ್ಚು.
ಆಸ್ಟ್ರೇಲಿಯಾದ ಇಬ್ಬರು ಬ್ಯಾಟ್ಸ್ಮನ್ಗಳಷ್ಟೆ ಎರಡಂಕಿ ರನ್ ಕಲೆಹಾಕಿದರು. ಉಳಿದವರ ಸ್ಕೋರ್ 5 ರನ್ಗಳ ಮೇಲೆ ಹೋಗಲಿಲ್ಲ. ಫಿಂಚ್ 5, ಸ್ಟೀವ್ ಸ್ಮಿತ್ 1, ಅಲೆಕ್ಸ್ ಕ್ಯಾರಿ 4, ಮಾರ್ಕಸ್ ಸ್ಟಾಯಿನಿಸ್ ಹಾಗೂ ಗ್ರೀನ್ ತಲಾ 3 ರನ್, ಆಸ್ಟನ್ ಅಗರ್ ಹಾಗೂ ಜೋಶ್ ಹ್ಯಾಜ್ಲೆವುಡ್ 0, ಮಿಚೆಲ್ ಸ್ಟಾರ್ಕ್ 2 ಹಾಗೂ ಆ್ಯಡಂ ಜಂಪಾ ಅಜೇಯ 1 ರನ್ ಗಳಿಸಿದರು.
ಜಿಂಬಾಬ್ವೆ ಪರ ಎಲ್ಲರೂ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇದರಲ್ಲಿ ಮುಖ್ಯವಾಗಿ ರ್ಯಾನ್ ಬರ್ಲ್ ಕೇವಲ 3 ಓವರ್ಗೆ 10 ನೀಡಿ 5 ವಿಕೆಟ್ ಕಬಳಿಸಿದರು. ಉಳಿದಂತೆ ಬ್ರಾಡ್ ಎವನ್ಸ್ 2 ವಿಕೆಟ್, ನಗರ್ವ, ನ್ಯೂಚಿ, ಸೀಮ್ ವಿಲಿಯ್ಸನ್ ತಲಾ 1 ವಿಕೆಟ್ ಪಡೆದರು.
#3rdODI | Historic! ?? Zimbabwe beat ?? Australia by 3 wickets to record their first win over Australia on Australian soil! ?
Australia however take the series 2⃣-1⃣ #AUSvZIM | #VisitZimbabwe pic.twitter.com/u5KA7Zlp10
— Zimbabwe Cricket (@ZimCricketv) September 3, 2022
ಸುಲಭ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಕೂಡ ಉತ್ತಮ ಆರಂಭ ಪಡೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿಯಿತು. ತಕುಡ್ವನಾಶೆ ಕೈತಾನೋ ಹಾಗೂ ತಡಿವಾನಾಶೆ ಮರುಮಣಿ 38 ರನ್ಗಳ ಜೊತೆಯಾಟ ಆಡಿದರು. ಕೈತಾನೋ 25 ಎಸೆತಗಳಲ್ಲಿ 19 ರನ್ಗೆ ಔಟಾದರೆ, ತಡಿವಾನಾಶೆ 47 ಎಸೆತಗಳಲ್ಲಿ 35 ರನ್ ಬಾರಿಸಿದರು. ನಂತರ ದಿಢೀರ್ ಕುಸಿತ ಕಂಡು 77 ರನ್ಗೆ 5 ವಿಕೆಟ್ ಕಳೆದುಕೊಂಡಿತು.
ಆದರೆ, ಐತಿಹಾಸಿಕ ಗೆಲುವು ಸಾಧಿಸಬೇಕೆಂದು ಪಣತೊಟ್ಟ ಜಿಂಬಾಬ್ವೆ ನಾಯಕ ರೆಜಿಸ್ ಚಕಬ್ವಾ 72 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಜಿಂಬಾಬ್ವೆ 39 ಓವರ್ಗಳಲ್ಲಿ 7 ವಿಕಟ್ ನಷ್ಟಕ್ಕೆ 142 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಕಂಡಿತು. ಈ ಮೂಲಕ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಮೊಟ್ಟ ಮೊದಲ ಗೆಲುವು ಸಾಧಿಸಿದೆ.
Published On - 11:31 am, Sat, 3 September 22