Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ನಡುವೆ ಹೊಸ ಕೇಂದ್ರ ಒಪ್ಪಂದ ಪ್ರಕಟ; 23 ಆಟಗಾರರಿಗೆ ಅವಕಾಶ

Australia Cricket's Central Contracts 2025: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 2025 ರ ಕೇಂದ್ರೀಯ ಒಪ್ಪಂದಗಳನ್ನು ಘೋಷಿಸಿದೆ. ಸ್ಯಾಮ್ ಕಾನ್ಸ್ಟಸ್, ಮ್ಯಾಟ್ ಕುನ್ಹೆಮನ್ ಮತ್ತು ಬ್ಯೂ ವೆಬ್‌ಸ್ಟರ್ ಹೊಸ ಆಟಗಾರರಾಗಿ ಸೇರ್ಪಡೆಯಾಗಿದ್ದಾರೆ. ಮತ್ತೊಂದೆಡೆ, ಟಾಡ್ ಮರ್ಫಿ, ಸೀನ್ ಅಬಾಟ್ ಮತ್ತು ಆರನ್ ಹಾರ್ಡಿ ಅವರನ್ನು ಕೈಬಿಡಲಾಗಿದೆ. ಲ್ಯಾನ್ಸ್ ಮೋರಿಸ್ ಮತ್ತು ಜೇ ರಿಚರ್ಡ್ಸನ್ ಗಾಯದಿಂದ ಬಳಲುತ್ತಿದ್ದರೂ ಒಪ್ಪಂದವನ್ನು ಉಳಿಸಿಕೊಂಡಿದ್ದಾರೆ.

ಐಪಿಎಲ್ ನಡುವೆ ಹೊಸ ಕೇಂದ್ರ ಒಪ್ಪಂದ ಪ್ರಕಟ; 23 ಆಟಗಾರರಿಗೆ ಅವಕಾಶ
Cricket Australia
Follow us
ಪೃಥ್ವಿಶಂಕರ
|

Updated on:Apr 01, 2025 | 4:32 PM

ಒಂದೆಡೆ ಆಸ್ಟ್ರೇಲಿಯಾದ ಹೆಚ್ಚಿನ ಕ್ರಿಕೆಟಿಗರು ಪ್ರಸ್ತುತ ಐಪಿಎಲ್ 2025 (IPL 2025) ರಲ್ಲಿ ಆಡುತ್ತಿದ್ದಾರೆ. ಮತ್ತೊಂದೆಡೆ, ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಕೇಂದ್ರ ಒಪ್ಪಂದವನ್ನು (Australia cricket central contracts) ಘೋಷಿಸಿದೆ. ಹೊಸ ಕೇಂದ್ರ ಒಪ್ಪಂದದಲ್ಲಿ 23 ಆಟಗಾರರಿಗೆ ಸ್ಥಾನ ನೀಡಲಾಗಿದೆ. ವಿಶೇಷವೆಂದರೆ ಈ ಬಾರಿ 3 ಹೊಸ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, 3 ಆಟಗಾರರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಅವರಲ್ಲಿ ಇಬ್ಬರು ಆಟಗಾರರು ಚಾಂಪಿಯನ್ಸ್ ಟ್ರೋಫಿಯನ್ನು ಆಡಿದ್ದ ತಂಡದ ಭಾಗವಾಗಿದ್ದರು.

ಯಾರು ಔಟ್, ಯಾರು ಇನ್?

ಮೊದಲ ಬಾರಿಗೆ ಕೇಂದ್ರ ಒಪ್ಪಂದವನ್ನು ಪಡೆದ ಮೂವರು ಆಟಗಾರರೆಂದರೆ ಸ್ಯಾಮ್ ಕಾನ್ಸ್ಟಸ್, ಮ್ಯಾಟ್ ಕುನ್ಹೆಮನ್ ಮತ್ತು ಬ್ಯೂ ವೆಬ್‌ಸ್ಟರ್. ಹಾಗೆಯೇ 23 ಆಟಗಾರರ ಹೊಸ ಪಟ್ಟಿಯಿಂದ ಹೊರಗಿರುವ ಮೂವರು ಆಟಗಾರರು ಟಾಡ್ ಮರ್ಫಿ, ಸೀನ್ ಅಬಾಟ್ ಮತ್ತು ಆರನ್ ಹಾರ್ಡಿ. ಇವರಲ್ಲಿ, ಆರನ್ ಹಾರ್ಡಿ ಮತ್ತು ಸೀನ್ ಅಬಾಟ್ ಚಾಂಪಿಯನ್ಸ್ ಟ್ರೋಫಿಯನ್ನು ಆಡಿದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಆದರೆ, ಅವರಿಗೆ ಅಲ್ಲಿ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಗಲಿಲ್ಲ. ಇನ್ನು ಟಾಡ್ ಮರ್ಫಿ ಬಗ್ಗೆ ಹೇಳುವುದಾದರೆ, ಅವರು ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಮೂರನೇ ಸ್ಪಿನ್ನರ್ ಆಗಿ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.

ಕೇಂದ್ರ ಒಪ್ಪಂದ ಪಡೆದ 3 ಹೊಸ ಆಟಗಾರರಲ್ಲಿ ಸ್ಯಾಮ್ ಕಾನ್ಸ್ಟಸ್ ಬಗ್ಗೆ ಹೇಳುವುದಾದರೆ, ಅವರು ಪ್ರಸ್ತುತ ಟೆಸ್ಟ್ ಸ್ವರೂಪದಲ್ಲಿ ಆಸ್ಟ್ರೇಲಿಯಾದ ಭಾಗವಾಗಿದ್ದಾರೆ. ಅವರು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಹಾಗೆಯೇ ಮ್ಯಾಟ್ ಕುನ್ಹೆಮನ್ ಶ್ರೀಲಂಕಾ ಪ್ರವಾಸದಲ್ಲಿ ನೀಡಿದ ಅಮೋಘ ಪ್ರದರ್ಶನ ಅವರಿಗೆ ಕೇಂದ್ರ ಒಪ್ಪಂದದಲ್ಲಿ ಅವಕಾಶ ನೀಡಿದೆ.

ಇವರ ಕೇಂದ್ರ ಒಪ್ಪಂದ ಹಾಗೆಯೇ ಉಳಿದಿದೆ

ಗಾಯಗಳಿಂದ ಬಳಲುತ್ತಿದ್ದರೂ, ಲ್ಯಾನ್ಸ್ ಮೋರಿಸ್ ಮತ್ತು ಜೇ ರಿಚರ್ಡ್ಸನ್ ಅವರ ಕೇಂದ್ರ ಒಪ್ಪಂದ ಹಾಗೆಯೇ ಮುಂದುವರೆದಿದೆ. ಇವರ ಜೊತೆಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಸ್ಥಾನ ಪಡೆಯದಿದ್ದರೂ ಕೇಂದ್ರ ಒಪ್ಪಂದದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2025-26ರ ಆಸ್ಟ್ರೇಲಿಯಾ ಕ್ರಿಕೆಟ್ ಕ್ಯಾಲೆಂಡರ್

2025-26ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ 19 ದ್ವಿಪಕ್ಷೀಯ ಟಿ20 ಪಂದ್ಯಗಳನ್ನು ಆಡಲಿದೆ. ಇದಲ್ಲದೆ, ಆಸೀಸ್ ತಂಡ ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಬೇಕಾಗಿದೆ. ಟಿ20 ಸರಣಿಯ ಹೊರತಾಗಿ, 2025-26ರ ಸೀಸನ್​ನಲ್ಲಿ 9 ಏಕದಿನ ಮತ್ತು 7 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

IND vs AUS: ಭಾರತ- ಆಸ್ಟ್ರೇಲಿಯಾ ನಡುವೆ ಏಕದಿನ, ಟಿ20 ಸರಣಿ; ವೇಳಾಪಟ್ಟಿ ಪ್ರಕಟ

ಕೇಂದ್ರ ಒಪ್ಪಂದ ಪಡೆದ ಆಸ್ಟ್ರೇಲಿಯಾದ ಆಟಗಾರರು

ಸ್ಕಾಟ್ ಬೋಲ್ಯಾಂಡ್, ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್. ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಜೋಶ್ ಇಂಗ್ಲಿಸ್, ಸ್ಯಾಮ್ ಕಾನ್ಸ್ಟಸ್, ಮ್ಯಾಟ್ ಕುನ್ಹೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಲ್ಯಾನ್ಸ್ ಮೋರಿಸ್, ಜೇ ರಿಚರ್ಡ್‌ಸನ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್, ಆಡಮ್ ಝಂಪಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Tue, 1 April 25