Shane Warne Passes Away: ಹೃದಯಾಘಾತದಿಂದ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್​ ವಾರ್ನ್ ನಿಧನ

| Updated By: ಪೃಥ್ವಿಶಂಕರ

Updated on: Mar 04, 2022 | 8:11 PM

Shane Warne Passes Away: ಸ್ವತಃ ಶೇನ್ ವಾರ್ನ್ ಕೂಡ ಬೆಳಗ್ಗೆಯೇ ಮಾರ್ಷ್ ಸಾವಿನ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು. ಆದರೆ ಸಂಜೆಯ ವೇಳೆಗೆ ವಾರ್ನ್ ಅವರ ಸಾವಿನ ಸುದ್ದಿ ಕ್ರಿಕೆಟ್​ ಜಗತ್ತಿಗೆ ಬರ ಸಿಡಿಲಿನಂತೆ ಬಂದೆರಗಿದೆ.

Shane Warne Passes Away: ಹೃದಯಾಘಾತದಿಂದ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್​ ವಾರ್ನ್ ನಿಧನ
Follow us on

ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ (Shane Warne Passes Away). ಅವರಿಗೆ 52 ವರ್ಷ ವಯಸ್ಸಾಗಿತ್ತು. ಥೈಲ್ಯಾಂಡ್‌ನಲ್ಲಿದ್ದ ಶೇನ್ ವಾರ್ನ್ ಇದ್ದಕ್ಕಿದ್ದಂತೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯನ್ ನ್ಯೂಸ್ ಚಾನೆಲ್ ಫಾಕ್ಸ್ ಸ್ಪೋರ್ಟ್‌ನ ವರದಿ ಮಾಡಿದೆ. ವಾರ್ನ್ ಅವರು ಥಾಯ್ಲೆಂಡ್‌ನ ವಿಲ್ಲಾದಲ್ಲಿ ನೆಲೆಸಿದ್ದರು. ಶನಿವಾರ ಬೆಳಿಗ್ಗೆ (ಆಸ್ಟ್ರೇಲಿಯನ್ ಸಮಯ) ಅವರು ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ವಾರ್ನ್​ ಅವರ ಆಪ್ತ ವಲಯ ಮಾಹಿತಿ ನೀಡಿದೆ.

ವಾರ್ನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಾರ್ನ್ 15 ವರ್ಷಗಳಿಂದ ಆಸ್ಟ್ರೇಲಿಯಾ ಪರ ಶ್ರೇಷ್ಠ ಬೌಲರ್ ಆಗಿದ್ದು 708 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುತ್ತಯ್ಯ ಮುರಳೀಧರನ್ ನಂತರ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡ ಖ್ಯಾತಿ ಶೇನ್ ವಾರ್ನ್​ ಅವರದ್ದು.

ವಾರ್ನ್​ ವೃತ್ತಿ ಬದುಕು
ಶೇನ್ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದರು. ಆದರೆ ನಂತರ ಅವರ ಪ್ರತಿಭೆ ಅನಾವರಣಗೊಂಡಿತ್ತು. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಅವರ ಸ್ಪಿನ್‌ ಜಾದೂಗೆ ಬಲಿಯಾಗಿ ಹೋಗಿದ್ದರು. ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ತಮ್ಮ 145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳನ್ನು ಪಡೆದು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ (800 ವಿಕೆಟ್) ನಂತರ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ 1999 ರ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಹಾಗೆಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.

ಮಾರ್ಚ್ 4 ಶುಕ್ರವಾರ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಒಳ್ಳೆಯ ದಿನವಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಆಸ್ಟ್ರೇಲಿಯಾ ತನ್ನ ಇಬ್ಬರು ಶ್ರೇಷ್ಠ ದಂತಕಥೆಗಳನ್ನು ಒಂದೇ ದಿನದಲ್ಲಿ ಕಳೆದುಕೊಂಡಿದೆ. ಶುಕ್ರವಾರ ಬೆಳಗ್ಗೆ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಹೃದಯಾಘಾತದಿಂದ ಜಗತ್ತಿಗೆ ವಿದಾಯ ಹೇಳಿದರು. ನಂತರ ತಡರಾತ್ರಿ ಶೇನ್ ವಾರ್ನ್ ಸಾವಿನ ಸುದ್ದಿ ಆಸ್ಟ್ರೇಲಿಯಾ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಸ್ವತಃ ಶೇನ್ ವಾರ್ನ್ ಕೂಡ ಬೆಳಗ್ಗೆಯೇ ಮಾರ್ಷ್ ಸಾವಿನ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು. ಆದರೆ ಸಂಜೆಯ ವೇಳೆಗೆ ವಾರ್ನ್ ಅವರ ಸಾವಿನ ಸುದ್ದಿ ಕ್ರಿಕೆಟ್​ ಜಗತ್ತಿಗೆ ಬರ ಸಿಡಿಲಿನಂತೆ ಬಂದೆರಗಿದೆ.

ಇದನ್ನೂ ಓದಿ:PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?

Published On - 7:47 pm, Fri, 4 March 22