AUS vs SL: 23 ವರ್ಷಗಳ ನಂತರ ಐತಿಹಾಸಿಕ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ
AUS vs SL: ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 242 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಸ್ಮಾನ್ ಖವಾಜಾ (232) ಮತ್ತು ಸ್ಟೀವ್ ಸ್ಮಿತ್ (141) ಅವರ ಅರ್ಧಶತಕಗಳು ಹಾಗೂ ಮ್ಯಾಥ್ಯೂ ಕುಹ್ನೆಮನ್ (9 ವಿಕೆಟ್) ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಆಸ್ಟ್ರೇಲಿಯಾದ ಗೆಲುವಿಗೆ ಕಾರಣವಾಯಿತು. ಈ ಗೆಲುವು ಆಸ್ಟ್ರೇಲಿಯಾದ ಇತಿಹಾಸದಲ್ಲಿ ನಾಲ್ಕನೇ ಅತಿ ದೊಡ್ಡ ಗೆಲುವಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲಿಯೇ ಆತಿಥೇಯ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಮತ್ತು 242 ರನ್‌ಗಳಿಂದ ಸೋಲಿಸಿದೆ. 4 ದಿನವೂ ನಡೆಯದ ಈ ಪಂದ್ಯವನ್ನು ಗೆದ್ದುಕೊಳ್ಳುವುದರೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 654 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 165 ರನ್‌ಗಳಿಗೆ ಆಲೌಟ್ ಆದ ಕಾರಣ ಫಾಲೋ-ಆನ್ ಆಡಬೇಕಾಯಿತು. ಎರಡನೇ ಇನಿಂಗ್ಸ್ನಲ್ಲೂ ಶ್ರೀಲಂಕಾ ವಿಶೇಷ ಸಾಧನೆ ಮಾಡಲು ಸಾಧ್ಯವಾಗದೆ 247 ರನ್ ಗಳಿಗೆ ಆಲೌಟ್ ಆಯಿತು.
23 ವರ್ಷಗಳ ನಂತರ ದಾಖಲೆ
ಲಂಕಾ ನಾಡಲ್ಲಿ ಈ ಭಾರಿ ಗೆಲುವಿನೊಂದಿಗೆ ಕಾಂಗರೂ ಪಡೆ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಲಂಕಾ ತಂಡವನ್ನು 242 ರನ್ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದ ಆಸ್ಟ್ರೇಲಿಯಾ ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶಿ ನೆಲದಲ್ಲಿ ಮೂರನೇ ಅತಿ ದೊಡ್ಡ ಗೆಲುವು ದಾಖಲಿಸಿದ ದಾಖಲೆ ಮಾಡಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ನಾಲ್ಕನೇ ಅತಿ ದೊಡ್ಡ ಗೆಲುವಾಗಿದೆ. ಹಾಗೆಯೇ 23 ವರ್ಷಗಳ ನಂತರ ಆಸ್ಟ್ರೇಲಿಯ ತಂಡ ಟೆಸ್ಟ್ ಪಂದ್ಯವೊಂದರಲ್ಲಿ 200ಕ್ಕೂ ಹೆಚ್ಚು ರನ್ ಹಾಗೂ ಇನ್ನಿಂಗ್ಸ್ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು 2002 ರಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ 360 ರನ್ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿತ್ತು.
ಆಸ್ಟ್ರೇಲಿಯಾದ ಸಾಂಘೀಕ ದಾಳಿ
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ 232 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿದಲ್ಲದೆ 141 ರನ್‌ಗಳ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. ಇವರ ಜೊತೆಗೆ ಚೊಚ್ಚಲ ಟೆಸ್ಟ್ ಆಡಿದ ಜೋಶ್ ಇಂಗ್ಲಿಸ್ ಕೂಡ ಕೇವಲ 94 ಎಸೆತಗಳಲ್ಲಿ 102 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಮತ್ತೊಂದೆಡೆ ಬೌಲಿಂಗ್ನಲ್ಲಿ ಮಿಂಚಿದ ಮ್ಯಾಥ್ಯೂ ಕುಹ್ನೆಮನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರು. ಇವರ ಜೊತೆಗೆ ನಾಥನ್ ಲಿಯಾನ್ ಕೂಡ ಅದ್ಭುತ ಪ್ರದರ್ಶನ ನೀಡಿ ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ