IPL 2025: ಬರುವುದಿಲ್ಲ; ಡೆಲ್ಲಿ ತಂಡಕ್ಕೆ ಕೈಕೊಟ್ಟ ಇಬ್ಬರು ಆಸ್ಟ್ರೇಲಿಯಾ ಆಟಗಾರರು
IPL 2025 Restart: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ನಂತರ, ಮೇ 9 ರಂದು ಸ್ಥಗಿತಗೊಂಡಿದ್ದ IPL 2025 ಮೇ 17 ರಿಂದ ಮರು ಆರಂಭವಾಗುತ್ತಿದೆ. ಆದರೆ, ಬದಲಾದ ವೇಳಾಪಟ್ಟಿಯಿಂದಾಗಿ ಅನೇಕ ವಿದೇಶಿ ಆಟಗಾರರು ತಮ್ಮ ಭಾಗವಹಿಸುವಿಕೆಯ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಕ್, ಹೇಜಲ್ವುಡ್ ಮತ್ತು ಮೆಕ್‌ಗುರ್ಕ್ ಅವರಂತಹ ಆಟಗಾರರು ಟೂರ್ನಿಗೆ ಮರಳದಿರಬಹುದು ಎಂಬ ಆತಂಕವಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಅರ್ಧಕ್ಕೆ ನಿಂತಿದ್ದ 2025 ರ ಐಪಿಎಲ್ (IPL 2025) ಸುಮಾರು 10 ದಿನಗಳ ನಂತರ ಮತ್ತೆ ಆರಂಭವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಮೇ 9 ರಂದು ಪಂದ್ಯಾವಳಿಯನ್ನು ಮುಂದೂಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ ನಂತರ, ಬಿಸಿಸಿಐ (BCCI) ಮೇ 17 ರಿಂದ ಪಂದ್ಯಾವಳಿಯ ಉಳಿದ ಭಾಗವನ್ನು ಆಯೋಜಿಸುವುದಾಗಿ ಘೋಷಿಸಿದೆ. ಆದರೆ ಬದಲಾದ ವೇಳಾಪಟ್ಟಿಯಿಂದಾಗಿ ಅನೇಕ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಐಪಿಎಲ್ 2025 ಸೀಸನ್ ಈ ಮೊದಲು ಪ್ರಕಟವಾಗಿದ್ದ ವೇಳಾಪಟ್ಟಿಯ ಪ್ರಕಾರ ಮೇ 25 ರಂದು ನಡೆಯಬೇಕಿದ್ದ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ, ಲೀಗ್ ಅನ್ನು ಒಂದು ವಾರ ನಿಲ್ಲಿಸಲು ನಿರ್ಧರಿಸಬೇಕಾಯಿತು. ಈಗ ಪಂದ್ಯಾವಳಿ ಮತ್ತೆ ಪ್ರಾರಂಭವಾಗುತ್ತಿದ್ದು, ಹೊಸ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಆ ಪ್ರಕಾರ ಈ ಸೀಸನ್ನ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಈ ಬದಲಾದ ವೇಳಾಪಟ್ಟಿ ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಗೊಂದಲ ಸೃಷ್ಟಿಸಿದೆ. ಅವರಲ್ಲಿ ಅನೇಕರು ಈಗಾಗಲೇ ತಮ್ಮ ದೇಶಕ್ಕೆ ಮರಳಿದ್ದು, ಇದೀಗ ವಿವಿಧ ಕಾರಣಗಳಿಂದ ಟೂರ್ನಿಗೆ ಮರಳಲು ಸಿದ್ಧರಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಎರಡನೇ ಹೊಡೆತ
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಅವರ ಹೆಸರುಗಳು ಈಗಾಗಲೇ ಕಾಣಿಸಿಕೊಂಡಿವೆ. ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡದ ಭಾಗವಾಗಿದ್ದರೆ, ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದರು. ಸ್ಟಾರ್ಕ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ತಂಡದ ಯುವ ಆರಂಭಿಕ ಆಟಗಾರ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಕೂಡ ತಂಡಕ್ಕೆ ಮರಳುತ್ತಿಲ್ಲ. ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಮೆಕ್‌ಗರ್ಕ್ ಅವರು ಟೂರ್ನಮೆಂಟ್‌ಗೆ ಹಿಂತಿರುಗುವುದಿಲ್ಲ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಸೀಸನ್ನಲ್ಲಿ ಮೆಕ್‌ಗರ್ಕ್ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಆರಂಭಿಕ ಪಂದ್ಯಗಳನ್ನು ಆಡಿದ ನಂತರ ಅವರನ್ನು ಬೆಂಚ್‌ನಲ್ಲಿ ಕುಳಿಸಲಾಗಿತ್ತು. ಮೆಕ್‌ಗರ್ಕ್ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ 9 ಕೋಟಿ ರೂ.ಗೆ ಖರೀದಿಸಿತು. ಆದರೆ ಈ ಸೀಸನ್ನಲ್ಲಿ ಅವರು ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಈ ಸೀಸನ್ನ ಮೊದಲ 6 ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿದ್ದ ಜೇಫ್ ಕೇವಲ 55 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲಿ ಅವರು 5 ಇನ್ನಿಂಗ್ಸ್‌ಗಳಲ್ಲಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾಗಿದ್ದರು.
IPL 2025: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್-ಡೆಲ್ಲಿ ಐಪಿಎಲ್ ಪಂದ್ಯ ರದ್ದು
ಈ ಆಟಗಾರರು ಬರುವುದು ಅನುಮಾನ
ಆಸ್ಟ್ರೇಲಿಯಾ ಮಾತ್ರವಲ್ಲ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರ ಭಾಗವಹಿಸುವಿಕೆಯ ಬಗ್ಗೆಯೂ ಅನುಮಾನಗಳಿವೆ. ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕಾಗಿದೆ. ಇದರ ಜೊತೆಗೆ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಾರ್ಕೊ ಯಾನ್ಸೆನ್, ಟ್ರಿಸ್ಟಾನ್ ಸ್ಟಬ್ಸ್, ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ಜಾಕೋಬ್ ಬೆಥೆಲ್ ಅವರಂತಹ ಆಟಗಾರರು ಉಳಿದ ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
