ರೋಹಿತ್- ಕೊಹ್ಲಿಗೆ ಎ+ ಗ್ರೇಡ್ನಿಂದ ಹಿಂಬಡ್ತಿ? ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
Rohit Sharma, Virat Kohli BCCI Contract: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಬಿಸಿಸಿಐ ಅವರಿಗೆ ಎ+ ಗ್ರೇಡ್ ಕೇಂದ್ರ ಒಪ್ಪಂದವನ್ನು ಮುಂದುವರಿಸಿದೆ. ಏಕದಿನ ಮಾದರಿಯಲ್ಲಿ ಮಾತ್ರ ಆಡುವ ಇವರಿಬ್ಬರಿಗೂ 7 ಕೋಟಿ ರೂಪಾಯಿ ವಾರ್ಷಿಕ ವೇತನ ಮತ್ತು ಇತರ ಎಲ್ಲಾ ಎ+ ಗ್ರೇಡ್ ಸವಲತ್ತುಗಳು ಲಭ್ಯವಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಟೀಂ ಇಂಡಿಯಾದ ಇಬ್ಬರು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕೆಲವೇ ದಿನಗಳ ಅಂತರದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದು ಮಾತ್ರವಲ್ಲದೆ ಈ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಟಿ20ಗೂ ಕಳೆದ ವರ್ಷವೇ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಇವರಿಬ್ಬರು ಇನ್ನು ಮುಂದೆ ಏಕದಿನ ಮಾದರಿಯಲ್ಲಿ ಮಾತ್ರ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಬಿಸಿಸಿಐ (BCCI) ಕೇಂದ್ರ ಗುತ್ತಿಗೆಯಲ್ಲಿ ಇಬರಿಬ್ಬರ ಗ್ರೇಡ್ ಬದಲಾಗುತ್ತದ ಎಂಬ ಪ್ರಶ್ನೆ ಮೂಡಿದೆ. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಈ ಇಬ್ಬರು ದಿಗ್ಗಜರು ಕೇವಲ ಏಕದಿನ ಮಾದರಿಯಲ್ಲಿ ಆಡುವುದರ ಹೊರತಾಗಿಯೂ ಇವರು ಎ+ ಗ್ರೇಡ್ನ ಸವಲತ್ತುಗಳನ್ನು ಪಡೆಯಲಿದ್ದಾರೆ ಎಂದಿದ್ದಾರೆ.
ಎ+ ಗ್ರೇಡ್ನಲ್ಲಿ 4 ಆಟಗಾರರಿಗೆ ಮಾತ್ರ ಅವಕಾಶ
ಬಿಸಿಸಿಐ ತನ್ನ ವಾರ್ಷಿಕ ಕೇಂದ್ರ ಒಪ್ಪಂದವನ್ನು ನಾಲ್ಕು ಶ್ರೇಣಿಗಳಾಗಿ ವಿಂಗಡಿಸಿದೆ. ಈ ನಾಲ್ಕು ಗ್ರೇಡ್ನಲ್ಲಿ ಸ್ಥಾನ ಪಡೆದ ಆಟಗಾರರಿಗೆ ಅವರು ಯಾವ ಗ್ರೇಡ್ನಲ್ಲಿ ಸ್ಥಾನ ಪಡೆದಿರುತ್ತಾರೋ ಆ ಪ್ರಕಾರ ಸವಲತ್ತುಗಳನ್ನು ನೀಡಲಾಗುತ್ತದೆ. ಇದರಲ್ಲಿ ಗ್ರೇಡ್ ಎ ಪ್ಲಸ್, ಗ್ರೇಡ್ ಎ, ಗ್ರೇಡ್ ಬಿ ಮತ್ತು ಗ್ರೇಡ್ ಸಿ ಸೇರಿವೆ. ಪ್ರಸ್ತುತ, ಗ್ರೇಡ್ ಎ ಪ್ಲಸ್‌ನಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ಇದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಉಳಿದ ಮೂವರಲ್ಲಿ ಯಾರೂ ಮೂರು ಸ್ವರೂಪಗಳನ್ನೂ ಆಡುತ್ತಿಲ್ಲ. ವಿರಾಟ್ ಮತ್ತು ರೋಹಿತ್ ಈಗ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದು, ರವೀಂದ್ರ ಜಡೇಜಾ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ. ವರದಿಯ ಪ್ರಕಾರ ಮೂರು ಸ್ವರೂಪಗಳಲ್ಲಿ ಆಡುವ ಆಟಗಾರರಿಗೆ ಮಾತ್ರ ಬಿಸಿಸಿಐ ‘ಎ’ ಪ್ಲಸ್ ಗ್ರೇಡ್ ನೀಡುತ್ತದೆ. ಹೀಗಿರುವಾಗ ಕೊಹ್ಲಿ ಮತ್ತು ರೋಹಿತ್ಗೆ ಹಿಂಬಡ್ತಿ ನೀಡಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ದೇವಜಿತ್ ಸೈಕಿಯಾ ಹೇಳಿದ್ದೇನು?
ಪ್ರಸ್ತುತ ಹಬ್ಬಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಟಿ20 ಮತ್ತು ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದರೂ ಅವರ ಎ+ ಗ್ರೇಡ್ ಒಪ್ಪಂದಗಳು ಮುಂದುವರಿಯುತ್ತವೆ. ಇಬ್ಬರೂ ಆಟಗಾರರು ಇನ್ನೂ ಭಾರತೀಯ ಕ್ರಿಕೆಟ್‌ನ ಭಾಗವಾಗಿದ್ದಾರೆ. ಅವರಿಗೆ ಎ+ ದರ್ಜೆಯ ಎಲ್ಲಾ ಸೌಲಭ್ಯಗಳು ಸಿಗಲಿವೆ ಎಂದಿದ್ದಾರೆ.
ಕೇಂದ್ರ ಒಪ್ಪಂದಕ್ಕೊಳಪಟ್ಟವರ ಸಂಬಳ ಎಷ್ಟು?
ಬಿಸಿಸಿಐ ಕೇಂದ್ರ ಒಪ್ಪಂದಕ್ಕೆ ಒಳಪಟ್ಟ ಆಟಗಾರರಿಗೆ ಆಯಾ ಗ್ರೇಡ್ ಮೀಸಲಿಟ್ಟಿರುವ ವೇತನವನ್ನು ನೀಡಲಾಗುತ್ತದೆ. ಅದರಂತೆ ಎ ಪ್ಲಸ್ ಗ್ರೇಡ್ ಪಡೆದಿರುವ ಆಟಗಾರರಿಗೆ ವಾರ್ಷಿಕವಾಗಿ 7 ಕೋಟಿ ರೂ. ವೇತನ ಪಡೆಯುತ್ತಾರೆ. ಇದರ ಜೊತೆಗೆ ಪಂದ್ಯ ಶುಲ್ಕ ಕೂಡ ಪ್ರತ್ಯೇಕವಾಗಿ ಸಿಗಲಿದೆ. ಎ ಗ್ರೇಡ್ ಪಡೆದ ಆಗಾರರಿಗೆ 5 ಕೋಟಿ ರೂ., ಬಿ ಗ್ರೇಡ್ ಪಡೆದ ಆಟಗಾರರಿಗೆ 3 ಕೋಟಿ ರೂ. ಮತ್ತು ಸಿ ಗ್ರೇಡ್ ಪಡೆದ ಆಟಗಾರರಿಗೆ 1 ಕೋಟಿ ರೂ. ನೀಡಲಾಗುತ್ತದೆ. ಇದರ ಜೊತೆಗೆ ಟೆಸ್ಟ್ ಪಂದ್ಯ ಆಡಲು 15 ಲಕ್ಷ ರೂ., ಏಕದಿನ ಪಂದ್ಯ ಆಡಲು 6 ಲಕ್ಷ ರೂ. ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಲು 3 ಲಕ್ಷ ರೂ. ಪಂದ್ಯ ಶುಲ್ಕ ನೀಡಲಾಗುತ್ತದೆ.
ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ವಿದಾಯ; ಕ್ರಿಕೆಟ್ ದೇವರ ದಾಖಲೆ ಮುರೆಯದೆ ಹೊರಟ ರನ್ ಸಾಮ್ರಾಟ
2024-25ರ ಕೇಂದ್ರ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರ ಪಟ್ಟಿ
ಎ+ ಗ್ರೇಡ್: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
ಎ ಗ್ರೇಡ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಬ್ ಪಂತ್.
ಬಿ ಗ್ರೇಡ್: ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್.
ಸಿ ಗ್ರೇಡ್: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
