
ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರುಗಳ ಈ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ. ಇನ್ನು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಮಿಚೆಲ್ ಸ್ಟಾರ್ಕ್ ಅವರನ್ನು ಈ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಹಾಗೆಯೇ ಕಳೆದ ಕೆಲ ಸರಣಿಗಳಿಂದ ಹೊರಗುಳಿದಿದ್ದ ಮಾರ್ಕಸ್ ಸ್ಟೊಯಿನಿಸ್ ಈ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ.
ಮತ್ತೊಂದೆಡೆ ಮುಂಬರುವ ಆ್ಯಶಸ್ ಸರಣಿಯನ್ನು ಗಮನದಲ್ಲಿರಿಸಿ ಈ ಸರಣಿಯಿಂದ ಪ್ಯಾಟ್ ಕಮಿನ್ಸ್ ಹಾಗೂ ಕ್ಯಾಮರೋನ್ ಗ್ರೀನ್ಗೆ ವಿಶ್ರಾಂತಿ ನೀಡಲಾಗಿದೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಕೂಡ ಸರಣಿಗೆ ಅಲಭ್ಯರಾಗಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಟಿ20 ತಂಡ ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.
ಆಸ್ಟ್ರೇಲಿಯಾ-ನ್ಯೂಝಿಲೆಂಡ್ ನಡುವಣ ಟಿ20 ಸರಣಿಯು ಅಕ್ಟೋಬರ್ 1 ರಿಂದ ಶುರುವಾಗಲಿದೆ. ಈ ಸರಣಿಯಿಂದ ನ್ಯೂಝಿಲೆಂಡ್ನ ಮೂವರು ಆಟಗಾರರು ಹೊರಗುಳಿಯಲಿದ್ದಾರೆ. ಬೆನ್ನಿನ ನೋವಿನಿಂದ ಬಳಲುತ್ತಿರುವ ಪ್ರಮುಖ ವೇಗಿ ವಿಲಿಯಂ ಒರೋಕ್ ಕನಿಷ್ಠ ಮೂರು ವಾರಗಳ ಕಾಲ ಕ್ರಿಕೆಟ್ ಅಂಗಳದಿಂದ ದೂರ ಉಳಿಯಲಿದ್ದಾರೆ.
ಇನ್ನು ಸ್ಫೋಟಕ ಆರಂಭಿಕ ದಾಂಡಿಗ ಫಿನ್ ಅಲೆನ್ ಅವರ ಬಲಗಾಲಿಗೆ ಗಾಯವಾಗಿದ್ದು, ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ.
ಮತ್ತೊಂದೆಡೆ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಚಿಕಿತ್ಸೆ ಪಡೆಯುತ್ತಿರುವ ಫಿಲಿಪ್ಸ್ ಕೂಡ ಇನ್ನೂ ಒಂದು ತಿಂಗಳ ಕಾಲ ಮೈದಾನಕ್ಕಿಳಿಯಲ್ಲ. ಅದರಂತೆ ನ್ಯೂಝಿಲೆಂಡ್ ಟಿ20 ತಂಡ ಈ ಕೆಳಗಿನಂತಿದೆ..
ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜೇಕಬ್ಸ್, ಆಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ, ವಿಲಿಯಂ ಒರೋಕ್ (ಅಲಭ್ಯ), ಗ್ಲೆನ್ ಫಿಲಿಪ್ಸ್ (ಅಲಭ್ಯ), ಫಿನ್ ಅಲೆನ್ (ಅಲಭ್ಯ).
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್
ಈ ಸರಣಿಯ ಎಲ್ಲಾ ಪಂದ್ಯಗಳು ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿನಲ್ಲಿರುವ ಬೇ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
Published On - 10:53 am, Tue, 2 September 25