ಆಸ್ಟ್ರೇಲಿಯಾದ ದಿವಂಗತ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರ ಪಾರ್ಥಿವ ಶರೀರವನ್ನು ಖಾಸಗಿ ಜೆಟ್‌ನಲ್ಲಿ ಗುರುವಾರ ಬ್ಯಾಂಕಾಕ್‌ನಿಂದ ಅವರ ತವರು ನಗರವಾದ ಮೆಲ್ಬೋರ್ನ್‌ಗೆ ಆಸ್ಟ್ರೇಲಿಯಾದ ಧ್ವಜದಲ್ಲಿ ಸುತ್ತಿದ ಶವಪೆಟ್ಟಿಗೆಯಲ್ಲಿ ತರಲಾಯಿತು. ಸ್ಥಳೀಯ ಕಾಲಮಾನ ರಾತ್ರಿ 8.30ರ ಸುಮಾರಿಗೆ ಖಾಸಗಿ ಜೆಟ್ ಇಲ್ಲಿಗೆ ಬಂದಿಳಿಯಿತು. ಮಾರ್ಚ್ 30 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ವಾರ್ನ್ ಅಂತ್ಯಕ್ರಿಯೆ ನಡೆಯಲಿದೆ. ಸ್ಪಿನ್ ಜಾದೂಗಾರ ವಾರ್ನ್ ಶುಕ್ರವಾರ ಹೃದಯಾಘಾತದಿಂದ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದ ವಿಲ್ಲಾದಲ್ಲಿ ನಿಧನರಾಗಿದ್ದರು. news.com.au ವರದಿಯ ಪ್ರಕಾರ, “ಆಸ್ಟ್ರೇಲಿಯನ್ ಕ್ರಿಕೆಟ್ ದಂತಕಥೆಯ ದೇಹವನ್ನು ಹೊತ್ತ ಖಾಸಗಿ ಜೆಟ್ ಗುರುವಾರ ರಾತ್ರಿ 8.30 ರ ಸುಮಾರಿಗೆ ಮೆಲ್ಬೋರ್ನ್‌ನ ಎಸ್ಸೆಂಡನ್ ಫೀಲ್ಡ್ಸ್ ಏರ್‌ಪೋರ್ಟ್‌ಗೆ ಬಂದಿಳಿಯಿತು ಎಂದು ವರದಿಯಾಗಿದೆ.
ವಾರ್ನ್ ಅವರ ಆಪ್ತ ಸಹಾಯಕಿ ಹೆಲೆನ್ ನೋಲನ್ ಸೇರಿದಂತೆ ಅಭಿಮಾನಿಗಳು ಮತ್ತು ಸ್ನೇಹಿತರು ವಿಮಾನ ನಿಲ್ದಾಣದಲ್ಲಿದ್ದಲ್ಲಿ ಹಾಜರಿದ್ದರು ಎಂದು ವರದಿ ಹೇಳಿದೆ. ಇದಕ್ಕೂ ಮೊದಲು ಬ್ಯಾಂಕಾಕ್‌ನಲ್ಲಿ, ಆಸ್ಟ್ರೇಲಿಯನ್ ಧ್ವಜದಲ್ಲಿ ಹೊದಿಸಿದ ಶವಪೆಟ್ಟಿಗೆಯನ್ನು ಥಾಯ್ ಪೊಲೀಸ್ ಫೋರೆನ್ಸಿಕ್ ಇನ್‌ಸ್ಟಿಟ್ಯೂಟ್ ಆಂಬ್ಯುಲೆನ್ಸ್‌ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಅಲ್ಲಿಂದ ಆಸ್ಟ್ರೇಲಿಯಾಗೆ ರವಾನಿಸಿದರು.
ವಿಕ್ಟೋರಿಯಾ ರಾಜ್ಯ ಸರ್ಕಾರವು ಮಾರ್ಚ್ 30 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ರಾಜ್ಯ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲ್ಲಿದ್ದು, ಇದಕ್ಕೂ ಮುನ್ನ ಅವರ ಅಂತಿಮ ಸಂಸ್ಕಾರವನ್ನು ಕುಟುಂಬದವರು ಖಾಸಗಿಯಾಗಿ ನೆರವೇರಿಸಲಿದ್ದಾರೆ. MCG ನಲ್ಲಿ, ವಾರ್ನ್ 1994 ರಲ್ಲಿ ಆಶಸ್ ಹ್ಯಾಟ್ರಿಕ್ ಮತ್ತು 2006 ರಲ್ಲಿ ಬಾಕ್ಸಿಂಗ್ ದಿನದಂದು 700 ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಹೀಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೂ ವಾರ್ನ್ ಅವರ ವೃತ್ತಿ ಬದುಕಿಗೂ ಅವಿನಾಭಾವ ಸಂಬಂಧವಿರುವುದರಿಂದ ಶ್ರದ್ಧಾಂಜಲಿ ಸಭೆಯನ್ನು ಅಲ್ಲಿ ನಡೆಸಲು ಸರ್ಕಾರ ಚಿಂತಿಸಿದೆ.
ನಂಬುವುದು ಕಷ್ಟ- ಡೇವಿಡ್ ವಾರ್ನರ್
ಲೆಜೆಂಡರಿ ಸ್ಪಿನ್ನರ್ ಮತ್ತು ದೇಶಬಾಂಧವ ಶೇನ್ ವಾರ್ನ್ ಅವರ ಸಾವನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ಗೆ ಸಿದ್ಧತೆ ನಡೆಸಲು ವಾರ್ನರ್ ಮತ್ತು ಆಸ್ಟ್ರೇಲಿಯಾ ತಂಡ ಬುಧವಾರ ಕರಾಚಿ ತಲುಪಿದೆ. ಅವರ ಅಂತ್ಯಕ್ರಿಯೆಯು ನಮಗೆಲ್ಲರಿಗೂ ಬಹಳ ಭಾವನಾತ್ಮಕ ಕ್ಷಣವಾಗಿರುತ್ತದೆ ಎಂದು ವಾರ್ನರ್ ಹೇಳಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ವಿಕ್ಟೋರಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಪ್ರಧನಿ ಹೇಳಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಅನೇಕ ಅಭಿಮಾನಿಗಳು ವಾರ್ನ್ರವರಿಗೆ ಗೌರವ ಸಲ್ಲಿಸಲು MCG ಬಳಿ ಬರುತ್ತಿದ್ದು, ಎಂಸಿಜಿಯಲ್ಲಿರುವ ವಾರ್ನ್ ಅವರ ಪ್ರತಿಮೆಗೆ ಜನರು ಹೂವು, ಸಿಗರೇಟ್ ಮತ್ತು ಬಿಯರ್ ಬಾಟಲಿ ಇಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: Shane warne: ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಶೇನ್ ವಾರ್ನ್ ಸಾವಿನ ರಹಸ್ಯ! ಥಾಯ್ ಪೊಲೀಸರು ಹೇಳಿದ್ದಿದು