ಭಾರತ ಕ್ರಿಕೆಟ್ ತಂಡ ಸದ್ಯ ಬಾಂಗ್ಲಾದೇಶ (India vs Bangladesh) ನಾಡಲ್ಲಿ ಬೀಡುಬಿಟ್ಟಿದ್ದು ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯ ಬಾಕಿಯಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ (Team India) ಸೋತ ಪರಿಣಾಮ ಸರಣಿ ಕಳೆದುಕೊಂಡಿದೆ. ಬಾಂಗ್ಲಾದೇಶ 2-0 ಅಂತರದ ಮುನ್ನಡೆ ಪಡೆದುಕೊಂಡು ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದು ಕ್ಲೀನ್ ಸ್ವೀಪ್ನತ್ತ ಚಿತ್ತ ನೆಟ್ಟಿದೆ. ಇತ್ತ ಭಾರತ ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳೊವ ಪ್ಲಾನ್ನಲ್ಲಿದೆ. ಏಕದಿನ ಸರಣಿ ಬಳಿಕ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸಲಾಗಿದೆ. ಇದೀಗ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಟೆಸ್ಟ್ ಸರಣಿಗೆ 17 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟ ಮಾಡಿದೆ. ಶಕಿಬ್ ಅಲ್ ಹಸನ್ (Shakib Al Hasan) ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಏಕದಿನ ತಂಡದಂತೆ ಬಾಂಗ್ಲಾ ಟೆಸ್ಟ್ ತಂಡ ಕೂಡ ಬಲಿಷ್ಠವಾಗಿದೆ.
ಮುಷ್ಫೀಕರ್ ರಹಿಮ್, ಯಾಸಿರ್ ಅಲಿ ಮತ್ತು ಟಸ್ಕಿನ್ ಅಹ್ಮದ್ ಬಾಂಗ್ಲಾದೇಶ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇದರ ಜೊತೆಗೆ ಝಾಕಿರ್ ಹಸನ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ. “ಜಾಕಿರ್ ಅತ್ಯಂತ ಪ್ರತಿಭಾವಂತ ಯುವ ಆಟಗಾರರಲ್ಲಿ ಒಬ್ಬರು. ಅವರು ಕಳೆದ ಐದು ವರ್ಷಗಳಿಂದ ನಮ್ಮ ಆಯ್ಕೆಯಲ್ಲಿದ್ದಾರೆ. ಕಳೆದ ವಾರ ಭಾರತ ಎ ತಂಡದ ವಿರುದ್ಧ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಈ ಸೀಸನ್ನ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ,” ಎಂದು ಬಾಂಗ್ಲಾದೇಶದ ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದಿನ್ ಹೇಳಿದ್ದಾರೆ.
ಕಳೆದ ಜೂನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದ ಮುಷ್ಫೀಕರ್ ರಹಿಮ್, ಯಾಸಿರ್ ಅಲಿ ಮತ್ತು ಟಸ್ಕಿನ್ ಅಹ್ಮದ್ ಅವರು ಬಾಂಗ್ಲಾದೇಶ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿರುವುದು ತಂಡದ ಬಲ ಮತ್ತಷ್ಟು ಹೆಚ್ಚಿಸಿದೆ. ಏಕದಿನ ಸರಣಿಯಲ್ಲಿ ಇಂಜುರಿಗೆ ತುತ್ತಾಗಿರುವ ತಮಿಮ್ ಇಖ್ಬಾಲ್ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ. ಮೊಸದ್ದೆಕ್ ಹೊಸೈನ್ ಮತ್ತು ಮುಸ್ತಫಿಜುರ್ ರಹ್ಮಾನ್ ಆಯ್ಕೆ ಆಗದಿರುವುದು ಅಚ್ಚರಿ ಮೂಡಿಸಿದೆ.
ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಷ್ಟರಲ್ಲೇ ತಂಡ ಸೇರಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!
ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹಸನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಷ್ಫೀಕರ್ ರಹಿಮ್, ಶಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಸೈಯದ್ ಖಲೀದ್ ಅಹ್ಮದ್, ಇಬಾ ಇಸ್ಲಾಮ್ ಇಸ್ಲಾಮ್ , ಝಾಕಿರ್ ಹಸನ್, ರೆಜೌರ್ ರೆಹಮಾನ್ ರಾಜಾ, ಅನಾಮುಲ್ ಹಕ್ ಬಿಜೋಯ್.
ಶಮಿ-ಜಡೇಜಾ ಔಟ್:
ಇಂಜುರಿಯಿಂದಾಗಿ ಏಕದಿನ ಸರಣಿಯಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕೂಡ ಅಲಭ್ಯರಾಗಿದ್ದಾರೆ ಎಂದು ವರದಿ ಆಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಮ್ಯಾಚ್ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಈ ಹೊತ್ತಿಗೆ ಶಮಿ ಗುಣಮುಖರಾಗುವುದು ಅನುಮಾನ ಆಗಿದ್ದರಿಂದ ಟೆಸ್ಟ್ ಸರಣಿಯಿಂದ ಔಟಾಗಿದ್ದಾರೆ. ಹಾಗೆಯೇ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ರವೀಂದ್ರ ಜಡೇಜಾ ಕೂಡ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಇವರು ಕೂಡ ಬಾಂಗ್ಲಾ ವಿರುದ್ಧದ ಟೆಸ್ಟ್ಗೆ ಅಲಭ್ಯರಾಗಲಿದ್ದಾರಂತೆ. ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಆಯ್ಕೆಗೆ ಪರಿಗಣಿಸಲಾಗುತ್ತದಂತೆ.
ಜಡೇಜಾ ಹಾಗೂ ಶಮಿ ಜಾಗಕ್ಕೆ ಉತ್ತರ ಪ್ರದೇಶದ ಸೌರಭ್ ಕುಮಾರ್ ಮತ್ತು ನವ್ದೀಪ್ ಸೈನಿ ಆಯ್ಕೆ ಆಗುವ ಸಾಧ್ಯತೆ ಇದೆ. ಇವರಿಬ್ಬರೂ ಸದ್ಯ ಭಾರತ ಎ ತಂಡದ ಪರ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಸೌರಭ್ ಕಳೆದ ರಣಜಿ ಟ್ರೋಫಿಯಿಂದಲೂ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ