Updated on: Dec 08, 2022 | 10:30 PM
ಐಪಿಎಲ್ 2023ರ ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೀಡಿದ್ದಾರೆ. ಇವರಲ್ಲಿ ಭಾರತದ 714 ಆಟಗಾರರು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ 19 ಆಟಗಾರರಿದ್ದಾರೆ. ಅವರಲ್ಲಿ ಕೇದರ್ ಜಾಧವ್ ಕೂಡ ಒಬ್ಬರು.
IPL 2022 ರಲ್ಲಿ 1 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕೇದರ್ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಈ ಬಾರಿ ಕೂಡ ಜಾಧವ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಕೂಡ ಕೋಟಿ ಮೊತ್ತದೊಂದಿಗೆ ಎಂಬುದು ವಿಶೇಷ.
ಹೌದು, ಈ ಬಾರಿ ಕೂಡ ಕೇದರ್ ಜಾಧವ್ ಅವರ ಮೂಲ ಬೆಲೆ 1 ಕೋಟಿ ರೂ. ಅತ್ತ ಕಳೆದ ಸೀಸನ್ನಲ್ಲೇ ಬಿಕರಿಯಾಗದೇ ಉಳಿದಿದ್ದ ಜಾಧವ್ ಈ ಬಾರಿ ಕೂಡ ತಮ್ಮ ಬೇಸ್ ಪ್ರೈಸ್ನಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಹೀಗಾಗಿ ಈ ಸಲ ಹರಾಜಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಐಪಿಎಲ್ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿರುವ ಕೇದರ್ ಜಾಧವ್ ಕಲೆಹಾಕಿರುವುದು 1196 ರನ್ಗಳು. ಅಂದರೆ ಕೇವಲ 22ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅದರಲ್ಲೂ ಕಳಪೆ ಪ್ರದರ್ಶನದ ಕಾರಣ ಐಪಿಎಲ್ 2021 ರಲ್ಲಿ ಜಾಧವ್ ಭಾರೀ ಟೀಕೆಗೆ ಒಳಗಾಗಿದ್ದರು. ಹೀಗಾಗಿಯೇ ಕಳೆದ ಸೀಸನ್ನಲ್ಲಿ ಹರಾಜಾಗಿರಲಿಲ್ಲ.
ಇದೀಗ ಮತ್ತೊಮ್ಮೆ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಕೇದರ್ ಜಾಧವ್ ಅವರನ್ನು ಯಾವ ತಂಡ ಖರೀದಿಸಲಿದೆ ಎಂಬ ಕುತೂಹಲ ಹಲವರಲ್ಲಿದೆ.
ಏಕೆಂದರೆ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್, ಕೊಚ್ಚಿನ್ ಟಸ್ಕರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದಾರಾಬಾದ್ ಪರ ಜಾಧವ್ ಆಡಿದ್ದರು. ಹೀಗಾಗಿ ಈ ಸಲ ಹೊಸ ತಂಡದ ಪಾಲಾಗಲಿದ್ದಾರಾ ಕಾದು ನೋಡಬೇಕಿದೆ.