AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs BAN: ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಆಟಗಾರ

Tanzid Hasan Tamim Century: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡ 153 ರನ್‌ಗಳ ಭಾರಿ ಮುನ್ನಡೆ ಸಾಧಿಸಿದೆ. ಆರಂಭಿಕ ಆಟಗಾರ ತಂಝಿದ್ ಹಸನ್ ತಮೀಮ್ ಐತಿಹಾಸಿಕ ಶತಕ (101 ರನ್) ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ತಂಝಿದ್ ಪಾತ್ರರಾದರು. ಇದು ಅವರ ಕೇವಲ ಎರಡನೇ ಟೆಸ್ಟ್ ಪಂದ್ಯ.

AUS vs BAN: ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಆಟಗಾರ
Tanzid Hasan Tamim
ಪೃಥ್ವಿಶಂಕರ
|

Updated on:Aug 14, 2026 | 2:39 PM

Share

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ (Australia vs Bangladesh) ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಆತಿಥೇಯ ಆಸೀಸ್ ಪಡೆಯನ್ನು ಮೊದಲ ಇನ್ನಿಂಗ್ಸ್​ನಲ್ಲಿ 198 ರನ್​ಗಳಿಗೆ ಕಟ್ಟಿಹಾಕಿದ ಬಾಂಗ್ಲಾದೇಶ ತಂಡ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 351 ರನ್ ಕಲೆಹಾಕಿದೆ. ಅಂದರೆ ಮೊದಲ ಇನ್ನಿಂಗ್ಸ್​ನಲ್ಲಿ ಪ್ರಸ್ತುತ 153 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಬಾಂಗ್ಲಾ ತಂಡದ ಈ ಮುನ್ನಡೆಗೆ ಪ್ರಮುಖ ಕಾರಣ 25 ವರ್ಷದ ಆರಂಭಿಕ ಆಟಗಾರ ತಂಝಿದ್ ಹಸನ್ ತಮೀಮ್ (Tanzid Hasan Tamim). ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ತಂಝಿದ್ ಹಸನ್ ತಮೀಮ್ ಅದ್ಭುತ ಶತಕ ಬಾರಿಸಿದರು. ಇದರೊಂದಿಗೆ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ತಮೀಮ್ ಸ್ಮರಣೀಯ ಶತಕ

ಸೊನ್ನೆಗೆ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ತಂಝಿದ್ ಹಸನ್ ತಮೀಮ್ ಸ್ಮರಣೀಯ ಶತಕ ಬಾರಿಸಿದಲ್ಲದೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು. 188 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಪೂರೈಸಿದ ತಂಝಿದ್, ಅಂತಿಮವಾಗಿ 197 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 101 ರನ್ ಗಳಿಸಿ ಔಟಾದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇದು ತಂಝಿದ್ ಹಸನ್ ಅವರ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವಾಗಿದೆ.

ತಂಝಿದ್ ಹಸನ್ ವೃತ್ತಿಜೀವನ

ಈ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ತಂಝಿದ್ ಆ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 26 ರನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 4 ರನ್ ಬಾರಿಸಿದ್ದರು. ಆ ಪಂದ್ಯವನ್ನು ಬಾಂಗ್ಲಾದೇಶ 78 ರನ್‌ಗಳಿಂದ ಗೆದ್ದುಕೊಂಡಿತ್ತು. ವೈಟ್-ಬಾಲ್ ಕ್ರಿಕೆಟ್​ನಲ್ಲಿ ಬಾಂಗ್ಲಾದೇಶ ತಂಡದ ಖಾಯಂ ಆಟಗಾರನಾಗಿರುವ ತಂಝಿದ್ ಇದುವರೆಗೆ 40 ಏಕದಿನ ಮತ್ತು 53 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಬರುವ ಮೊದಲೇ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ತಂಝಿದ್ ಜಿಂಬಾಬ್ವೆ ವಿರುದ್ಧದ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು.

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ

ಈ ಶತಕದ ವಿಶೇಷತೆಯಿದು

ತಂಝಿದ್ ಅವರ ಶತಕ ಹಲವು ವಿಧಗಳಲ್ಲಿ ಐತಿಹಾಸಿಕವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ನೊಬ್ಬ ಗಳಿಸಿದ ಎರಡನೇ ಶತಕ ಇದು. ಈ ಹಿಂದೆ 2006 ರಲ್ಲಿ ಫತುಲ್ಲಾದಲ್ಲಿ ಶಹರಿಯಾರ್ ನಫೀಸ್ 138 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದಲ್ಲದೆ, 2022 ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಹ್ಮದುಲ್ ಹಸನ್ ಜಾಯ್ ನಂತರ ವಿದೇಶಿ ನೆಲದಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ನೊಬ್ಬ ಗಳಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Fri, 14 August 26

Follow Us